ಬೆಂಗಳೂರು,ಫೆ.17- ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1 ಅನ್ನು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಪೂರ್ವ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 28ರಿಂದ ಮಾ.17ರವರೆಗೂ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತವೆ. ಮಾ.18ರಿಂದ ಏ.2ರವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 6,46,801 ಹೊಸಬರು, 50,540 ಪುನರಾವರ್ತಿತರು, 13,022 ಖಾಸಗಿ ಅಭ್ಯರ್ಥಿಗಳಿದ್ದಾರೆ. ವಿಜ್ಞಾನ ವಿಷಯದಲ್ಲಿ 2,92,645, ವಾಣಿಜ್ಯ ವಿಷಯದಲ್ಲಿ 2,11,174, ಕಲಾ ವಿಭಾಗದಲ್ಲಿ 1,42,982 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದಾರೆ.
ಪರೀಕ್ಷೆಗಾಗಿ 5174 ಕಾಲೇಜುಗಳು ನೊಂದಾಯಿಸಿಕೊಂಡಿವೆ. 1217 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಏ.7ರಂದು ಪರೀಕ್ಷಾ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ವಿಫಲಗೊಂಡ ವಿದ್ಯಾರ್ಥಿಗಳಿಗಾಗಿ ಏ.25ರಿಂದ ಮೇ 9ರ ನಡುವೆ ಪರೀಕ್ಷೆ-2ನ್ನು ನಡೆಸಲು ದಿನಾಂಕ ನಿಗದಿಪಡಿಸಿದ್ದು, ಮೇ 22ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 8,12,855 ವಿದ್ಯಾರ್ಥಿಗಳು ಹೊಸಬರು, 62,845 ಪುನರಾವರ್ತಿತರು, ಖಾಸಗಿ ಅಭ್ಯರ್ಥಿಗಳು 27,189 ಮಂದಿ ಇದ್ದಾರೆ. ಪರೀಕ್ಷೆಗಾಗಿ 15,941 ಶಾಲೆಗಳು ನೋಂದಾಯಿಸಿಕೊಂಡಿವೆ. 2,871 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಾ.18ರಿಂದ ಏ.2ರವರೆಗೆ ಪರೀಕ್ಷೆ ನಡೆಯಲಿದ್ದು, ಏ.24ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.ವಿಫಲಗೊಂಡ ವಿದ್ಯಾರ್ಥಿಗಳಿಗಾಗಿ ಮೇ 18ರಿಂದ ಮೇ 25ರವರೆಗೆ 2ನೇ ಪರೀಕ್ಷೆ ನಡೆಸಲಾಗುವುದು. ಅದರ ಫಲಿತಾಂಶವನ್ನು ಜೂ.1ರಂದು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳು ಯಾವುದೇ ಭಯ ಆತಂಕವಿಲ್ಲದೆ ಪರೀಕ್ಷೆ ಬರೆಯುವಂತೆ ಕರೆ ನೀಡಿದರು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಎಲ್ಲೆಡೆ ವೆಬ್‌ಕಾಸ್ಟಿಂಗ್ ನಡೆಸಲಾಗುವುದು. ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯಗಳನ್ನು ಏರ್ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ದೂರದೂರಿನಿಂದ ಬರುವ ವಿದ್ಯಾರ್ಥಿಗಳ ವಿವರವನ್ನು ಮೊದಲೇ ಪಡೆದುಕೊಂಡು ಅವರಿಗೆ ನಿಗದಿತ ಸಮಯಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿದರೆ ಉಚಿತ ಪ್ರಯಾಣದ ಸೌಲಭ್ಯವಿದೆ ಎಂದು ಸಚಿವರು ತಿಳಿಸಿದರು.
ಇನ್‌ಸ್ಟ್ರಗ್ರಾಂ, ಫೇಸ್‌ಬುಕ್, ವಾಟ್ಸಾಪ್, ಟೆಲಿಗ್ರಾಂ, ಯೂಟೂಬ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಹರಿಬಿಡುವವರ ವಿರುದ್ದ ಬಿಎನ್‌ಎಸ್ ಮತ್ತು ಶಿಕ್ಷಣ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಹಾಗೂ ಸಂಬಂಧಿಸಿದವರ ಖಾತೆಗಳನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿದರು.
ಈಗಾಗಲೇ ಮಾದರಿ ಪಶ್ನೆ ಪತ್ರಿಕೆಯನ್ನು ನೀಡುವ ಮೂಲಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಂಭವನೀಯ ಪ್ರಶ್ನೆಗಳ ಕುರಿತು ಶಾಲೆಗಳಲ್ಲಿ ಅಧ್ಯಯನಗಳಾಗಿವೆ. ಮಾದರಿ ಉತ್ತರಪತ್ರಿಕೆಗಳನ್ನು ಕೂಡ ಒದಗಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಪೂರ್ವ ಸಿದ್ದತಾ ಸಭೆಗಳನ್ನು ನಡೆಸಲಾಗಿದೆ. ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗುವುದು. ಜೆರಾಕ್‌್ಸ, ಸೈಬರ್, ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಿಸಲಾಗುವುದು ಎಂದರು.
ಸ್ಯಾಟ್ ಪದ್ದತಿಯಿಂದಾಗಿ ಒಂದಿಷ್ಟು ಗೊಂದಲಗಳಾಗಿ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿರಬಹುದು. ಈ ಹಂತದಲ್ಲಿ ನಾವು ಏನೂ ಮಾಡಲಾಗುವುದಿಲ್ಲ. ಮುಂದಿನ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬಯೋಮೆಟ್ರಿಕ್ ಹಾಗೂ ಮುಖ ಚಹರೆ ಗುರುತಿಸುವ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಅನುದಾನ ರಹಿತ ಶಾಲೆಗಳಿಗೆ ಪಾಲಿಸಬೇಕಾದ ಕ್ರಮಗಳ ಬಗ್ಗೆ ಅಧಿವೇಶನದ ಬಳಿಕ ಪರಿಶೀಲನೆ ನಡೆಸವುದಾಗಿ ಹೇಳಿದರು.
2ನೇ ಮತ್ತು 3ನೇ ಹಂತದ ಪರೀಕ್ಷಾ ಪದ್ಧತಿಗಳು ದೇಶದಲ್ಲೇ ಜನಪ್ರಿಯಗೊಂಡಿವೆ. ಭಯಮುಕ್ತ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಮಾದರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ:
ಫೆಬ್ರವರಿ 28: ಕನ್ನಡ, ಅರೇಬಿಕ್
ಮಾರ್ಚ್ 2: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 3: ಇಂಗ್ಲಿಷ್
ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 5: ಇತಿಹಾಸ
ಮಾರ್ಚ್ 6: ಭೌತಶಾಸ್ತ್ರ
ಮಾರ್ಚ್ 7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 10: ಅರ್ಥಶಾಸ್ತ್ರ
ಮಾರ್ಚ್ 11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12: ಹಿಂದಿ
ಮಾರ್ಚ್ 13: ರಾಜ್ಯಶಾಸ್ತ್ರ
ಮಾರ್ಚ್ 14: ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 17: ಹಿಂದುಸ್ತಾನಿ ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ
(ದ್ವಿತೀಯ ಪಿಯುಸಿ ಪರೀಕ್ಷೆ-1 ಬೆಳಗ್ಗೆ 10 ರಿಂದ ಮಧ್ಯಾಹ್ನ 1ಗಂಟೆವರೆಗೆ ನಡೆಯಲಿದೆ.)
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ:
ಮಾರ್ಚ್ 18: ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ)
ಮಾರ್ಚ್ 23: ವಿಜ್ಞಾನ
ಮಾರ್ಚ್ 25: ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಮಾರ್ಚ್ 28: ಗಣಿತ
ಮಾರ್ಚ್ 30: ತೃತೀಯ ಭಾಷೆ
ಏಪ್ರಿಲ್ 2: ಸಮಾಜ ವಿಜ್ಞಾನ
(ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿದೆ.)
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ವೇಳಾಪಟ್ಟಿ
ಮೇ 18: ಪ್ರಥಮ ಭಾಷೆ
ಮೇ 19: ವಿಜ್ಞಾನ
ಮೇ 20: ದ್ವಿತೀಯ ಭಾಷೆ
ಮೇ 21: ಗಣಿತ
ಮೇ 22: ತೃತೀಯ ಭಾಷೆ
ಮೇ 23: ಸಮಾಜ ವಿಜ್ಞಾನ
