ಬೆಂಗಳೂರು,ಫೆ.26-ರೌಡಿ, ಬೇಕರಿ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನ ಬಂದಂತೆ ಹಲ್ಲೆ ನಡೆಸಿ ಆತನ ಮನೆ ಮುಂದೆ ತಾಯಿ ಎದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಅಮರಜ್ಯೋತಿ ಲೇಔಟ್ ನಿವಾಸಿ ಪವನ್ ಕುಮಾರ್ (28) ಕೊಲೆಯಾದ ಬೇಕರಿ ಮಾಲೀಕ. ಈತ ಡಿಜೆಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್. ರಾಜಾನುಕುಂಟೆಯಲ್ಲಿ ಬೇಕರಿ ಇಟ್ಟುಕೊಂಡಿದ್ದ ಪವನ್ ರಾತ್ರಿ ಎಂದಿನಂತೆ ವ್ಯಾಪಾರ ವಹಿವಾಟು ಮುಗಿಸಿ ಅಂಗಡಿಗೆ ಬೀಗ ಹಾಕಿಕೊಂಡು ತನ್ನ ಡಿಯೋ ಸ್ಕೂಟರ್‌ನಲ್ಲಿ 9.30ರ ಸುಮಾರಿನಲ್ಲಿ ಮನೆ ಬಳಿ ಬಂದು ವಾಹನ ನಿಲ್ಲಿಸುತ್ತಿದ್ದಂತೆ ಈತನನ್ನು ಹಿಂಬಾಲಿಸಿಕೊಂಡು ಮೂರು ಬೈಕ್‌ಗಳಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಏಕಾಏಕಿ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿದ್ದಾರೆ.
ಪವನ್ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡು ಮನೆಯೊಳಗಿನಿಂದ ತಾಯಿ ಹೊರಗೆ ಬಂದಿದ್ದಾರೆ. ದುಷ್ಕರ್ಮಿಗಳು ಮಗನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಂಡು ಬಿಟ್ಟುಬಿಡುವಂತೆ ಗೋಳಾಡಿದರೂ ಮನ ಕರಗದ ದುಷ್ಕರ್ಮಿಗಳು ಪವನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಂಭೀರ ಗಾಯಗೊಂಡ ಪವನ್ ಮನೆ ಮುಂದೆಯೇ ಸಾವನ್ನಪ್ಪಿದ್ದಾನೆ.ಸುದ್ದಿ ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪವನ್ ಕುಟುಂಬಸ್ಥರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.ಪವನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಶೋಧ ಕೈಗೊಂಡಿದ್ದಾರೆ. ಪವನ್ ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ. ಹಳೇ ದ್ವೇಷದಿಂದ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ಆ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
