ಬೆಂಗಳೂರು, ಜೂ. 1- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರ್ ಅವರ ಪುತ್ರಿ ಶರ್ಮಿಳಾ ಸೇರಿದಂತೆ ಹಲವಾರು ಮಂದಿ ಹೆಸರು ರಾಜ್ಯಸಭೆ ಸದಸ್ಯರ ಸ್ಥಾನಕ್ಕೆ ಚರ್ಚೆಯಾಗಿದೆ.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಡಾ.ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್, ಬೈರತಿ ಸುರೇಶ್, ಜಮೀರ್ ಅಹಮದ್‌ಖಾನ್, ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸೇರಿದಂತೆ ಹಲವರ ಜೊತೆ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದಾರೆ.
ಸಚಿವ ಸಂಪುಟ ರಚನೆ ಜೊತೆಯಲ್ಲೇ ವಿಧಾನ ಪರಿಷತ್, ರಾಜ್ಯ ಸಭೆ ಸದಸ್ಯರ ಆಯ್ಕೆ ಕುರಿತಂತೆ ಹೈಕಮಾಂಡ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್ ತನ್ನ ಸಂಖ್ಯಾ ಬಲದ ಆಧಾರದ ಮೇಲೆ ರಾಜ್ಯಸಭೆಯ 3 ಸ್ಥಾನ ಗೆಲ್ಲಲು ಅವಕಾಶ ಇದೆ. ಅದರಲ್ಲಿ ಒಂದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಉಳಿದ ಎರಡು ಸ್ಥಾನಗಳಲ್ಲಿ ಒಂದಕ್ಕೆ ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ರೆಡ್ಡಿ ಅವರ ಹೆಸರು ಕೇಳಿ ಬಂದಿದೆ.
ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಆಗಮಿಸುವಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಆಹ್ವಾನಿಸಿದರು. ರಾಜ್ಯಸಭೆಗೆ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಸಿದ್ದರಾಮಯ್ಯ ತಾವು ರಾಜ್ಯ ರಾಜಕಾರಣದಲ್ಲೇ ಇರುವುದಾಗಿ ಹೇಳಿದ್ದು, ರಾಜ್ಯಸಭೆ ಸ್ಥಾನ ನಯವಾಗಿ ತಿರಸ್ಕರಿಸಿದ್ದಾರೆ. ಇಂದು ಕೂಡ ಅವರ ಮನವರಿಕೆ ಮುಂದುವರೆದಿದೆ.
ಈ ನಡುವೆ ಪುತ್ರ ಯತೀಂದ್ರ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿಯೂ ಪ್ರಸ್ತಾಪ ಮಾಡಲಾಗಿದೆ. ಅದಕ್ಕೂ ಸಿದ್ದರಾಮಯ್ಯ ನಿರಾಕರಣೆ ತೋರಿಸಿದ್ದಾರೆ. ಕೊನೆಗೆ ರಾಹುಲ್ ಗಾಂಧಿ ಅವರು, ಪಾರ್ವತಿ ಅವರನ್ನು ರಾಜ್ಯ ಸಭೆಗೆ ಸ್ಪರ್ಧಿಸಲು ಅನುಮತಿಸುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಸ್ಪಷ್ಟವಾದ ನಿರಾಕರಣೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ತಮ ಪತ್ನಿ ಪಾರ್ವತಿ ಈವರೆಗೂ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ, ಅವರಿಗೆ ರಾಜಕಾರಣದ ಬಗ್ಗೆ ಆಸಕ್ತಿಯೇ ಇಲ್ಲ. ಹೀಗಾಗಿ ರಾಜ್ಯಸಭೆಗೆ ಅವರ ಸ್ಪರ್ಧೆ ಅಸಾಧ್ಯ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮೂರನೇ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಅವರ ಹೆಸರು ಕೇಳಿ ಬಂದಿದೆ. ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿ ಒಂದು ಅವಧಿಯ ಜವಾಬ್ದಾರಿಯನ್ನು ಪೂರ್ಣಗೊಳಿಸಿರುವ ಅವರು ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಸಚಿವ ಸ್ಥಾನಕ್ಕೇರುವ ನಿರೀಕ್ಷೆಯಲ್ಲಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ದೊರೆಯುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸಭೆಗೆ ಬಿ.ಕೆ.ಹರಿಪ್ರಸಾದ್ ಅವರನ್ನು ಮತ್ತೊಂದು ಅವಧಿಗೆ ಚುನಾಯಿಸುವ ಬಗ್ಗೆ ಕೂಡ ಚರ್ಚೆಯಾಗುತ್ತಿದೆ. ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಬಿ.ಕೆ.ಹರಿಪ್ರಸಾದ್ ಸಚಿವರಾಗುವ ಬಗ್ಗೆ ಅನುಮಾನಗಳಿವೆ. ಈವರೆಗೂ ಅವರು ಸಿದ್ದರಾಮಯ್ಯ ಅವರ ಬಣದಲ್ಲಿ ಅತೀ ಹೆಚ್ಚು ಗುರುತಿಸಿಕೊಂಡಿದ್ದರು. ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಉಸ್ತುವಾರಿ ನಿರ್ವಹಿಸುತ್ತಿರುವ ಬಿ.ಕೆ.ಹರಿಪ್ರಸಾದ್ ರಾಷ್ಟ್ರ ರಾಜಕಾರಣದತ್ತ ಮುಖ ಮಾಡುವ ಸಾಧ್ಯತೆ ಇದೆ.
ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪವನ್ ಖೇರಾ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವ ಚರ್ಚೆಗಳು ನಡೆಯುತ್ತಿವೆ.
ವಿಧಾನ ಪರಿಷತ್‌ನಲ್ಲಿ ಖಾಲಿಯಾಗುತ್ತಿರುವ 7 ಸ್ಥಾನಗಳ ಪೈಕಿ ಕಾಂಗ್ರೆಸ್ 4ರಲ್ಲಿ ಸುಲಭವಾಗಿ ಗೆಲ್ಲುವ ಅವಕಾಶಗಳಿವೆ. ಆದರೆ ಆಕಾಂಕ್ಷಿಗಳ ಸಂಖ್ಯೆ ಸುಮಾರು 30ಕ್ಕಿಂತಲೂ ಹೆಚ್ಚಿದೆ. ಬಿ.ಕೆ. ಹರಿಪ್ರಸಾದ್ ಪ್ರಬಲ ಆಕಾಂಕ್ಷಿಯಾಗಿದ್ದರೆ, ಮಾಜಿ ಸಚಿವ ಬಿ.ಎಲ್.ಶಂಕರ್, ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಎಲ್. ನಾರಾಯಣ್, ಹಾಲಿ ಸದಸ್ಯ ರಮೇಶ್ ಬಾಬು, ಬಿ.ಆರ್.ಸುದರ್ಶನ್, ನಿವೇದಿತ ಆಳ್ವ, ಮನ್ಸೂರ್ ಆಲಿಖಾನ್, ಐಶ್ವರ್ಯ ಮಹದೇವ್, ಎಂ.ಸಿ.ವೇಣುಗೋಪಾಲ್ ಸೇರಿದಂತೆ ಹಲವಾರು ಮಂದಿ ಲಾಬಿ ನಡೆಸುತ್ತಿದ್ದಾರೆ.
ಸಂಪುಟ ಪುನರ್ ರಚನೆಯ ಗಂಭೀರ ಚರ್ಚೆ ನಡುವೆ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಸದಸ್ಯರ ಆಯ್ಕೆ ಕುರಿತು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೊಂದಿಗೆ ಹೈಕಮಾಂಡ್ ನಾಯಕರ ಚರ್ಚೆ ನಡೆದಿದೆೆ.
