Homeಕ್ರೀಡಾ ಸುದ್ದಿಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ ಇಲ್ಲ

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ ಇಲ್ಲ

No RCB victory parade in Bengaluru

ಅಹಮದಾಬಾದ್‌,ಜೂ.1- ಸತತ ಎರಡನೇ ಬಾರಿ ಐಪಿಎಲ್‌ ಪ್ರಶಸ್ತಿಯನ್ನು ಗೆದ್ದಿರುವ ಆರ್‌ಬಿಸಿ ತಂಡದೊಂದಿಗೆ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲು ಅಭಿಮಾನಿಗಳಿಗೆ ಅವಕಾಶ ಈ ಬಾರಿಯೂ ಮಿಸ್‌‍.

ಕಳೆದ ವರ್ಷ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆ ಸಾರ್ವಜನಿಕ ಮೆರವಣಿಗೆ ನಡೆಸದಿರಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.ಆದರೆ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ಬೇಡ ಎಂಬ ನಿರ್ಧಾರಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ನೂತನ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ.

ಸೋಮವಾರ ಸಂಜೆ 4.10ಕ್ಕೆ ಲೋಕಭವನದಲ್ಲಿ ಈ ಕಾರ್ಯಕ್ರಮ ನಿಗದಿಯಾಗಿದ್ದು, ರಾಜಭವನ ಹಾಗೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಪರಸ್ಪರ ಸಮೀಪದಲ್ಲಿವೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಹಲವಾರು ಗಣ್ಯರು ಭಾಗವಹಿಸಲಿರುವ ಈ ಸಮಾರಂಭಕ್ಕೆ ದೊಡ್ಡ ಪ್ರಮಾಣದ ಪೊಲೀಸ್‌‍ ಬಂದೋಬಸ್ತ್‌ ಅಗತ್ಯವಿರುವುದರಿಂದ, ಮತ್ತೊಂದು ಭಾರಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಹೆಚ್ಚುವರಿ ಭದ್ರತೆ ಒದಗಿಸುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಗರ ರಸ್ತೆಗಳಲ್ಲಿ ಸಾರ್ವಜನಿಕ ಸಂಭ್ರಮಾಚರಣೆ ನಡೆಸದಂತೆ ಪೊಲೀಸರು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವುದು ಸೂಕ್ತ ಎಂದು ಆರ್‌ಸಿಬಿ ಆಡಳಿತ ಮಂಡಳಿ ನಿರ್ಧರಿಸಿದೆ.

2025ರ ಜೂನ್‌ 4ರಂದು ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್‌ ಪ್ರಶಸ್ತಿ ಗೆದ್ದ ಬಳಿಕ ತುರ್ತಾಗಿ ಆಯೋಜಿಸಲಾಗಿದ್ದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. ಆ ದುರಂತ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರ ಮತ್ತು ನ್ಯಾಯಾಂಗದ ಮಧ್ಯಪ್ರವೇಶಕ್ಕೂ ಕಾರಣವಾಗಿತ್ತು. ಆರ್‌ಸಿಬಿ ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ಯಾವುದೇ ಸಾರ್ವಜನಿಕ ವಿಜಯೋತ್ಸವ ಕಾರ್ಯಕ್ರಮ ನಡೆಯುವ ಸಾಧ್ಯತೆ ಬಹಳ ಕಡಿಮೆ. ಕೆಲವು ನಿಯಮಾವಳಿಗಳು ಜಾರಿಯಲ್ಲಿದ್ದು, ಅವುಗಳನ್ನು ಪಾಲಿಸಬೇಕಾಗಿದೆೞೞ ಎಂದು ತಿಳಿಸಲಾಗಿದೆ.

ಈಗಾಗಲೇ ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಪಟಾಕಿ ಸಿಡಿಸುವುದು, ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸುವುದನ್ನು ನಿಲ್ಲಸಿ ಗಲಾಟೆ ಅಥವಾ ಅಹಿತಕರ ಘಟನೆಗಳು ನಡೆಯದಂತೆ ನೀಡಿಕೊಂಡಿದ್ದಾರೆ.

ಇದರ ಜೊತೆಗೆ, ಆರ್‌ಸಿಬಿ ಆಟಗಾರ ದೇವದತ್‌ ಪಡಿಕ್ಕಲ್‌ ಅವರು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯಕ್ಕಾಗಿ ಭಾರತೀಯ ತಂಡವನ್ನು ಬುಧವಾರ ಮುಲ್ಲಾನ್‌ಪುರದಲ್ಲಿ ಸೇರಬೇಕಿದೆ. ಇನ್ನು ಜೋಶ್‌ ಹೇಜಲ್‌ವುಡ್‌‍, ಟಿಮ್‌ ಡೇವಿಡ್‌‍, ಜೇಕಬ್‌ ಡಫಿ ಹಾಗೂ ರೊಮಾರಿಯೊ ಶೆಫರ್ಡ್‌ ಅವರಿಗೂ ರಾಷ್ಟ್ರೀಯ ತಂಡಗಳ ಕರ್ತವ್ಯಗಳಿರುವುದರಿಂದ ತಂಡದ ಆಟಗಾರರು ಶೀಘ್ರದಲ್ಲೇ ವಿವಿಧ ದೇಶಗಳಿಗೆ ತೆರಳಲಿದ್ದಾರೆ.

RELATED ARTICLES

Latest News