ಬೆಂಗಳೂರು, ಫೆ.26 – ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ನಗರದ ಬನಶಂಕರಿ ದೇವಾಲಯದ ಆವರಣದಲ್ಲಿ ಹಮಿಕೊಂಡಿದ್ದ 27ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಂದು 46 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಐದು ವಿಕಲಚೇತನರು ಸೇರಿದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 46 ದಂಪತಿಗಳನ್ನು ಗುರು ಹಿರಿಯರು ಆಶೀರ್ವದಿಸಿದರು. ಬೆಳಿಗ್ಗೆ 11.23 ಕ್ಕೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸದ್ಗುರು ಶ್ರೀ ಗುರುದೇವ ದತ್ತ ಅವಧೂತ ಸ್ವರೂಪ ಶ್ರೀ ಶ್ರೀ ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್ ಶ್ರೀಗಳು ವಹಿಸಿದ್ದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಡಿಸಿಎಂ ಆರ್.ಅಶೋಕ್, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಶಾಸಕ ಎಂ.ಕೃಷ್ಣಪ್ಪ, ರವಿಸುಬ್ರಮಣ್ಯ, ಟಿ.ಎ.ಶರವಣ, ಚಿತ್ರನಟಿ ತಾರಾ ಅನುರಾಧ, ಬಿ.ಟಿ. ಲಲಿತ ನಾಯಕ್, ಸಮಾಜ ಸೇವಕರಾದ ಕೆ.ಭಾಗೇಗೌಡ, ರಘುನಾಥ್ ನಾಯ್ಡು, ನಿರ್ಮಾಪಕ ಎಂ.ರಮೇಶ್ ರೆಡ್ಡಿ, ಹೆಚ್.ಎಂ.ರಮೇಶ್ ಗೌಡ, ಮಾಜಿ ಮೇಯರ್ ಎಸ್.ಕೆ. ನಟರಾಜ್, ಬನಶಂಕರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿಎನ್‌ಆರ್.ಮೋಹನ್, ಕಾರ್ಯನಿರ್ವಾಹಕ ಅಧಿಕಾರಿ ಎನ್. ಕೃಷ್ಣಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್ ಶ್ರೀನಿವಾಸ್ ಮತ್ತಿತರರು ನವ ವಧು-ವರರನ್ನು ಆಶೀರ್ವದಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ನವ ವಧು-ವರರಿಗೆ ಉಚಿತ ತಾಳಿ, ಕಾಲುಂಗುರ, ಸೀರೆ, ಪಂಚೆ, ಶಲ್ಯ ನೀಡಲಾಯಿತು. ವಧು-ವರರ ಜೊತೆ ಬರುವಂತಹ ಸಂಬಂಧಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಸಾಮೂಹಿಕ ವಿವಾಹ ವೇದಿಕೆಯ ವ್ಯವಸ್ಥಾಪಕ ಹಾಗೂ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ತಿಳಿಸಿದರು.
ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಬೇಕು ಹಾಗೂ ಬಡವರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಕಳೆದ 26 ವರ್ಷಗಳಿಂದ ನಾವು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮ ಈ ಕಾರ್ಯ ನಿರಂತರವಾಗಿ ಮುಂದುವರೆಯುತ್ತದೆ ಎಂದರು.
