Wednesday, April 29, 2026
Homeರಾಜ್ಯಭೂ ಸ್ವಾಧೀನ ವಿಚಾರದಲ್ಲಿ ರೈತರಿಗೆ ನ್ಯಾಯ ಒದಗಿಸಲು ಮಾರ್ಗಸೂಚಿ ದರ ಪರಿಷ್ಕರಣೆ : ಕೃಷ್ಣ ಬೈರೇಗೌಡ

ಭೂ ಸ್ವಾಧೀನ ವಿಚಾರದಲ್ಲಿ ರೈತರಿಗೆ ನ್ಯಾಯ ಒದಗಿಸಲು ಮಾರ್ಗಸೂಚಿ ದರ ಪರಿಷ್ಕರಣೆ : ಕೃಷ್ಣ ಬೈರೇಗೌಡ

Revision of guideline rates to provide justice to farmers in land acquisition

ಬೆಂಗಳೂರು,ಮಾ.11- ಭೂ ಸ್ವಾಧೀನ ಪ್ರಕ್ರಿಯೆ ಪರಿಹಾರದ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವುದೊಂದೇ ಪರಿಹಾರ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಪರಿಷತ್‌ನಲ್ಲಿ ಸದಸ್ಯರಾದ ಕೆ.ಎಸ್‌‍.ನವೀನ್‌ ಅವರು 2019 ಕ್ಕೂ ಹಿಂದಿನ ಮಾರ್ಗಸೂಚಿ ದರ ಆಧಾರದಲ್ಲಿ ಈಗಿನ ಭೂಸ್ವಾದೀನಕ್ಕೆ ಪರಿಹಾರ ನೀಡುವುದು ರೈತರಿಗೆ ನಷ್ಟವಲ್ಲವೇ? ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಉತ್ತರ ನೀಡಿದ ಕಂದಾಯ ಸಚಿವರು, ಭೂ ಸ್ವಾಧೀನಕ್ಕೆ ರೈತರಿಗೆ ಪರಿಹಾರ ನೀಡುವ ಸಂಬಂಧ 2013ರ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಈ ಕಾನೂನಿನ ಪ್ರಕಾರ ಭೂ ಸ್ವಾಧೀನಕ್ಕೆ ಪ್ರಾಧಮಿಕ ಅಧಿಸೂಚನೆ ಹೊರಡಿಸಿದ ನಂತರ ಅಂತಹ ಭೂಮಿಗೆ ಹೊಸದಾಗಿ ಮಾರ್ಗಸೂಚಿ ದರವನ್ನು ಪರಿಷ್ಕರಿಸುವುದಿಲ್ಲ.

ಬದಲಾಗಿ ಹಿಂದಿನ ಮಾರ್ಗಸೂಚಿ ದರ ಅಥವಾ ಹಿಂದಿನ ಮೂರು ವರ್ಷದ ಮಾರುಕಟ್ಟೆಯ ನೋಂದಾಯಿತ ಸೇಲ್‌ ಡೀಡ್‌ (ಮಾರಾಟ ಪತ್ರ) ದರವನ್ನು ಪರಿಗಣಿಸಲಾಗುತ್ತದೆ. ಆ ಪೈಕಿ ಭೂಮಿ ಹೆಚ್ಚಿನ ದರಕ್ಕೆ ವಹಿವಾಟು ಆಗಿರುವ ಆಧಾರದಲ್ಲಿ ಸರಾಸರಿ ಮೊತ್ತವನ್ನು ಪರಿಹಾರವಾಗಿ ನಿಗದಿಪಡಿಸಲಾಗುತ್ತದೆ ಎಂದು ವಿವರಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕೆ.ಎಸ್‌‍.ನವೀನ್‌ ಅವರು ಹಳೆಯ ಮಾರ್ಗಸೂಚಿ ದರದ ಆಧಾರದಲ್ಲೇ ಪರಿಹಾರದ ಮೊತ್ತವನ್ನು ನಿಗದಿಪಡಿಸುವುದು ರೈತರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ಎಂಬ ಮರುಪ್ರಶ್ನೆಗೆ ಉತ್ತರ ನೀಡಿದ ಅವರು, ಸರ್ಕಾರ ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಭೂ ಸ್ವಾಧೀನ ಮಾಡುತ್ತಲೇ ಇರುತ್ತದೆ. ಕಾಲದಿಂದ ಕಾಲಕ್ಕೆ ದರ ಪರಿಷ್ಕರಣೆ ಮಾಡದಿದ್ದಲ್ಲಿ ರೈತರಿಗೆ ನಷ್ಟವಾಗುತ್ತದೆ ಎಂಬುದು ಸತ್ಯ. ಇದೇ ಕಾರಣಕ್ಕೆ ನಾವೂ ಸಹ ಮಾರ್ಗಸೂಚಿ ದರ ಪರಿಷ್ಕರಣೆ ಆಗಬೇಕು ಎನ್ನುತ್ತೇವೆ. ಆದರೆ, ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವಿಷಾದಿಸಿದರು.

ಈ ಬಗ್ಗೆಯೂ ಸದನದ ಗಮನ ಸೆಳೆದ ಕೃಷ್ಣಬೈರೇಗೌಡ ಅವರು, ಕೆಲವು ಕಡೆ ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕೆಲವು ಕಡೆ ಭೂಮಿ ಮಾರ್ಗಸೂಚಿ ದರ 2 ಲಕ್ಷ ಇದ್ದರೆ, ಮಾರುಕಟ್ಟೆ ಮೌಲ್ಯ 70 ರಿಂದ 80 ಲಕ್ಷ ಇದೆ. ಪರಿಣಾಮ ಕಪ್ಪು ಹಣದ ವಹಿವಾಟಿಗೂ ಇದು ಕಾರಣವಾಗಿದೆ. ಹೀಗಾಗಿ ಈ ಎಲ್ಲಾ ಅಕ್ರಮ ವಹಿವಾಟುಗಳನ್ನೂ ನಿಯಂತ್ರಿಸಿ ರೈತರಿಗೂ ನ್ಯಾಯಬದ್ಧ ಪರಿಹಾರ ನೀಡಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆಯೊಂದೇ ಪರಿಹಾರ ಎಂದು ಅವರು ವಿವರಿಸಿದರು.

RELATED ARTICLES

Latest News