Thursday, April 30, 2026
Homeರಾಜ್ಯವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿಧೇಯಕ ಅಸ್ತು

ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿಧೇಯಕ ಅಸ್ತು

Teachers Transfer Regulation Amendment Bill in the Legislative Assembly

ಬೆಂಗಳೂರು,ಮಾ.24- ಬೋಧಕ ಹುದ್ದೆಗಳ ಸ್ಥಾನಿಕರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿನ ಬೋಧಕೇತರ ಹುದ್ದೆಗಳಿಗೆ, ರಾಜ್ಯ ಸಿವಿಲ್‌ ಸೇವೆಗಳು ಅಥವಾ ಮಂಡಳಿಗಳು ಅಥವಾ ನಿಗಮಗಳಲ್ಲಿನ ಯಾವುದೇ ಇತರ ಹುದ್ದೆಗಳಿಗೆ ವರ್ಗಾವಣೆಗೆ ಅವಕಾಶ ನೀಡದ 2026ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿಂದು ಅನುಮೋದನೆ ದೊರೆಯಿತು.

ಶಾಸನಾ ರಚನಾ ಕಲಾಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಈ ವಿಧೇಯಕವನ್ನು ಪರ್ಯಾಲೋಚನೆಗಾಗಿ ಮಂಡಿಸಿ ವಿವರಣೆ ನೀಡಿದ ನಂತರ ಹಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿ ಉಪಯುಕ್ತ ಸಲಹೆಗಳನ್ನು ನೀಡಿದ ನಂತರ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.

ಇದಕ್ಕೂ ಮುನ್ನ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕೌನ್ಸಿಲಿಂಗ್‌ ಮೂಲಕ ಶಿಕ್ಷಕರನ್ನು ವರ್ಗಾವಣೆ ಮಾಡುವಾಗ ಕರ್ನಾಟಕ ಪಬ್ಲಿಕ್‌ ಶಾಲೆ, ಆದರ್ಶ ವಿದ್ಯಾಲಯ ಮತ್ತು ಪಿಎಂಶ್ರೀ ಶಾಲೆಗಳಿಗೆ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಶಿಕ್ಷಕರ ಹುದ್ದೆಗಳನ್ನು ಕ್ರಿಟಿಕಲ್‌ ಹುದ್ದೆ ಎಂದು ಪರಿಗಣಿಸಲಾಗುವುದು. ಈ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿದ ನಂತರ ಉಳಿದ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುವುದು ಎಂದರು.

ಕೌನ್ಸಿಲಿಂಗ್‌ ಮೂಲಕ ಶಿಕ್ಷಕರ ವರ್ಗಾವಣೆ ಮಾಡಲಾಗುವುದು. ಶಾಲೆ ಅಥವಾ ಕಾಲೇಜುಗಳಲ್ಲಿನ ಸ್ಥಾನಿಕ ವೃಂದದಲ್ಲಿ ಸಲ್ಲಿಸಿರುವ ಕನಿಷ್ಠ ಸೇವಾವಧಿಯು 12 ವರ್ಷಗಳಾಗಿರಬೇಕು. ಕಲ್ಯಾಣ ಕರ್ನಾಟಕ ಕೋಟಾದಡಿಯಲ್ಲಿ ನೇಮಕಗೊಂಡ ಶಿಕ್ಷಕರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕು. ಆ ನಂತರ ವರ್ಗಾವಣೆಗೆ ಅವಕಾಶ ದೊರೆಯಲಿದೆ. ಶಿಕ್ಷಕಿಯರು ಪ್ರಸೂತಿ ರಜೆ ಪಡೆದ ಬಳಿಕ ಮಗುವಿಗೆ 5 ವರ್ಷ ತುಂಬುವವರೆಗೆ ಅವರು ಇಚ್ಛಿಸುವ ಶಾಲೆಯಲ್ಲಿ ಮುಂದುವರೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಒಂದು ಶಾಲೆ ಅಥವಾ ಪದವಿ ಪೂರ್ವ ಕಾಲೇಜಿನಲ್ಲಿ ಕನಿಷ್ಠ ಸೇವಾವಧಿಯನ್ನು ಸಲ್ಲಿಸಿರುವ ಶಿಕ್ಷಕ ಅಥವಾ ಉಪನ್ಯಾಸಕನಿಗೆ ವರ್ಗಾವಣೆಗಾಗಿ ಲಭ್ಯವಿರುವ ನಿರ್ಣಾಯಕ ಹುದ್ದೆ ಮತ್ತು ನಿಯಮಿಸಬಹುದಾದಂತಹ ಇತರ ಷರತ್ತುಗಳಿಗೆ ಒಳಪಟ್ಟು ವರ್ಗಾವಣೆಯನ್ನು ಕೋರಲು ಆಯ್ಕೆ ನೀಡಲಾಗುತ್ತದೆ ಎಂದರು.

ಕರ್ನಾಟಕ ಪಬ್ಲಿಕ್‌ ಶಾಲೆ, ಪಿಎಂಶ್ರೀ ಶಾಲೆ, ಆದರ್ಶ ವಿದ್ಯಾರ್ಥಿ ಶಾಲೆಗಳಿಗೆ 36 ಸಾವಿರ ಶಿಕ್ಷಕರು ಬೇಕು. 19 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಉಳಿಯುತ್ತವೆ ಎಂದು ಹೇಳಿದರು.
ವಿಧೇಯಕ ಕುರಿತು ಮಾತನಾಡಿದ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಡಿ ಗ್ರೂಪ್‌ ಹುದ್ದೆಗಳನ್ನು ನೇಮಕ ಮಾಡಿ ಮಕ್ಕಳನ್ನು ಶುಚಿತ್ವದ ಕೆಲಸಕ್ಕೆ ಬಳಸಲಾಗುತ್ತಿದೆ ಎಂದರು.

ಇದಕ್ಕೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಧ್ವನಿಗೂಡಿಸಿದರು. ಸಚಿವ ಮಧು ಬಂಗಾರಪ್ಪ ಮಾತನಾಡಿ, 15 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಡಿ ಗ್ರೂಪ್‌ ನೇಮಕಕ್ಕೆ ಅನುಮತಿ ದೊರೆತಿಲ್ಲ ಎಂದರು.

ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಶಿಕ್ಷಕರ ಮತ್ತು ಮಕ್ಕಳ ಅನುಪಾತದಲ್ಲಿ ಸಡಿಲಿಕೆ ಮಾಡಬೇಕು. ಮಹಾತ ಗಾಂಧೀಜಿಯವರೇ ಶೌಚಾಲಯ ಸ್ವಚ್ಛ ಮಾಡಿದ್ದಾರೆ. ಮಕ್ಕಳು ಅವರಿಗಿಂತ ದೊಡ್ಡವರೇ ಎಂದು ಪ್ರಶ್ನಿಸಿದರು.
ಹಲವು ಶಾಸಕರು ವಿಧೇಯಕ ಕುರಿತು ಚರ್ಚೆ ಮಾಡಿ ಉಪಯುಕ್ತ ಸಲಹೆಗಳನ್ನು ನೀಡಿದರು.
ಶಾಸಕರ ಸಲಹೆಗಳನ್ನು ಆಲಿಸಿದ ಶಾಸಕ ಮಧು ಬಂಗಾರಪ್ಪ ಅವರು, ನಿಯಮಗಳನ್ನು ರೂಪಿಸುವಾಗ ಶಾಸಕರ ಸಲಹೆಗಳನ್ನು ಪರಿಗಣಿಸಲಾಗುವುದು ಎಂದರು.

RELATED ARTICLES

Latest News