ಮಂಗಳೂರು,ಮಾ.27- ಬೆಳ್ಳಂಬೆಳಗ್ಗೆ ನಗರ ಹೊರವಲಯದ ತೊಕ್ಕೊಟ್ಟು ಮೇಲ್ಸೇತುವೆ ಬಳಿ ದುಷ್ಕರ್ಮಿಗಳ ತಂಡ ರೌಡಿಶೀಟರ್‌ನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದೆ. ಮುಳ್ಳುಗುಡ್ಡೆ ಹೌಸ್ ತಲಪಾಡಿ ನಿವಾಸಿ ಆರೀಫ್ ಅಲಿಯಾಸ್ ಟಾಬ್ಲೆಟ್ ಆರಿಫ್ ಕೊಲೆಯಾದ ರೌಡಿಶೀಟರ್.
ಇಂದು ಬೆಳಗಿನ ಜಾವ ಆರೀಫ್ ಮನೆಯಿಂದ ಬೈಕ್‌ನಲ್ಲಿ ಉಡುಪಿಗೆ ಹೋಗುತ್ತಿದ್ದಾಗ ಹಂತಕರು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ರೌಡಿಶೀಟರ್ ಆರೀಫ್ ರಸ್ತೆಗೆ ಬೀಳುತ್ತಿದ್ದಂತೆ ಏಕಾಏಕಿ ಆತನ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ .
ಎದುರಾಳಿ ಗ್ಯಾಂಗ್ ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೊಲೆಯಾದ ಆರೀಫ್ ಮೇಲೆ ಕರಾವಳಿಯ ಹಲವು ಪೊಲೀಸ್ ಠಾಣೆಗಳಲ್ಲಿ ಕೊಲೆ ,ಸುಲಿಗೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆೆ.
