ಬೆಂಗಳೂರು, ಮಾ.27- ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ಕಡಿತ ಮಾಡಿ ತೈಲ ಕಂಪನಿಗಳ ಮೇಲಾಗುತ್ತಿದ್ದ ಆರ್ಥಿಕ ಹೊರೆಯನ್ನು ತಗ್ಗಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ತೈಲ ಸಂಪತ್ತಿನಿಂದ ತಾನು ಪಡೆಯುತ್ತಿರುವ ಲಾಭದಲ್ಲಿ ಒಂದಿಷ್ಟು ಕಡಿಮೆ ಮಾಡಿ ಗ್ರಾಹಕರಿಗೆ ನೆರವಾಗಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.
ಪೆಟ್ರೋಲ್, ಡೀಸೆಲ್ ವಹಿವಾಟನ್ನು ಜಿಎಸ್‌ಟಿಯಿಂದ ಹೊರಗಿಟ್ಟಿದ್ದು, ರಾಜ್ಯ ಸರ್ಕಾರಗಳು ವ್ಯಾಟ್ ಮೂಲಕ ಮಾರಾಟ ತೆರಿಗೆಯನ್ನು ಸಂಗ್ರಹಿಸುತ್ತಿವೆ. ಇದರಿಂದಾಗಿ ಕೇಂದ್ರ ಸರ್ಕಾರದಷ್ಟೇ ಸರಿಸಮಾನವಾದ ಲಾಭಾಂಶವನ್ನು ರಾಜ್ಯ ಸರ್ಕಾರಗಳು ಪಡೆಯುತ್ತಿವೆ.
ಕರ್ನಾಟಕ ಪೆಟ್ರೋಲ್ ಮೇಲೆ ಶೇ.29.84ರಷ್ಟು, ಡೀಸೆಲ್ ಮೇಲೆ ಶೇ.21.17ರಷ್ಟು ಮಾರಾಟ ತೆರಿಗೆಯನ್ನು ಪಡೆಯುತ್ತಿದೆ. ದೇಶದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕೇರಳ ಹೊರತುಪಡಿಸಿದರೆ ಕರ್ನಾಟಕ ಅತೀ ಹೆಚ್ಚು ಮಾರಾಟ ತೆರಿಗೆಯನ್ನು ಪೆಟ್ರೋಲ್ ಮೇಲೆ ವಸೂಲಿ ಮಾಡುತ್ತಿದೆ. ಡೀಸೆಲ್ ಮೇಲೆ ಅಸ್ಸಾಂ, ಆಂಧ್ರಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ,
ತೆಲಂಗಾಣ ರಾಜ್ಯಗಳಿಗಿಂತಲೂ ಕರ್ನಾಟಕ ಹೆಚ್ಚಿನ ಮಾರಾಟ ತೆರಿಗೆಯನ್ನು ವಸೂಲಿ ಮಾಡುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸಿದ್ದೇ ಆದರೆ ಪ್ರತಿ ಲೀ. ಪೆಟ್ರೋಲ್ ಮತ್ತು ಡೀಸೆಲ್ ಸರಾಸರಿ 60 ರೂ.ಗೆ ಗ್ರಾಹಕರಿಗೆ ಲಭ್ಯವಾಗಬಹುದು. ಆದರೆ ಡೀಲರ್ ಕಮೀಷನ್, ಕೇಂದ್ರ ಸರ್ಕಾರದ ಅಬಕಾರಿ ಸುಂಕ ರಾಜ್ಯ ಸರ್ಕಾರದ ಮಾರಾಟ ತೆರಿಗೆ ಸೇರಿದರೆ, ಪೆಟ್ರೋಲ್, ಡೀಸೆಲ್ ಬೆಲೆ 100ರ ಆಜುಬಾಜು ಗಡಿಯಲ್ಲಿದ್ದು, ಗ್ರಾಹಕರನ್ನು ಜೀವ ಹಿಂಡುವಂತೆ ಮಾಡುತ್ತಿದೆ.
ಇರಾನ್, ಇಸ್ರೇಲ್-ಅಮೆರಿಕ ನಡುವಿನ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 109 ರೂ.ಗೆ ಏರಿಕೆಯಾಗಿದೆ. ಅದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಇಂಧನದ ಬೆಲೆ ಹೆಚ್ಚಳವಾಗುವ ಆತಂಕ ಇತ್ತು. ಕೇಂದ್ರ ಸರ್ಕಾರ 10 ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಸಂಭವನೀಯ ಬೆಲೆ ಏರಿಕೆಯನ್ನು ತಡೆ ಹಿಡಿಯುವ ಪ್ರಯತ್ನ ಮಾಡಿದೆ.
ಕೇಂದ್ರದ ನಿರ್ಧಾರದಿಂದಾಗಿ ಬೆಲೆ ಏರಿಕೆ ಕಡಿಮೆಯಾಗಬಹುದು. ಆದರೆ ಗ್ರಾಹಕರಿಗೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಕಾರಣಕ್ಕೆ ರಾಜ್ಯ ಸರ್ಕಾರ ಕೇಂದ್ರದ ಮಾದರಿಯಲ್ಲೇ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ, ಜನರ ಮೇಲಾಗುತ್ತಿರುವ ಹೊರೆಯನ್ನು ತಗ್ಗಿಸಬೇಕು ಎಂಬ ಒತ್ತಡಗಳು ಕೇಳಿ ಬಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿಗಳಿಂದಾಗುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸಲು ಕಳೆದ ವರ್ಷದ ಏಪ್ರಿಲ್‌ನಲ್ಲಿ ಪ್ರತಿ ಲೀ. ಮೇಲೆ ತಲಾ 2 ರೂ. ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿದ್ದರು.. ಆ ವೇಳೆಗೆ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ರಾಜ್ಯ ಸರ್ಕಾರದ ಶುಲ್ಕ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಒಂದು ವರ್ಷಗಳಿಂದಲೂ ಗ್ರಾಹಕರು ರಾಜ್ಯ ಸರ್ಕಾರದ ದರ ಏರಿಕೆಯನ್ನು ಅವುಡುಗಚ್ಚಿ ಸಹಿಸಿದ್ದಾರೆ. ಯುದ್ಧ ಕಾಲದಲ್ಲಿ ಸಂಕಷ್ಟ ಎದುರಾಗಿದ್ದು ಎಲ್ಲಾ ಬೆಲೆಗಳು ದುಬಾರಿಯಾಗಿ, ಜನ ಸಾಮಾನ್ಯರನ್ನು ಕಂಗೆಡುವಂತೆ ಮಾಡಿವೆ. ಇಂತಹ ವೇಳೆಯಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರಿಗೆ ನೆರವಾಗಬೇಕು ಎಂದು ಒತ್ತಾಯಿಸಲಾಗುತ್ತಿದೆ.
