Thursday, April 30, 2026
Homeರಾಜ್ಯಬೆಂಗಳೂರಿಗರನ್ನು ಕಾಡುತ್ತಿದೆ ಸಾವಿನ ಭಯ..!

ಬೆಂಗಳೂರಿಗರನ್ನು ಕಾಡುತ್ತಿದೆ ಸಾವಿನ ಭಯ..!

Fear of death haunts Bengaluru residents..!

ಬೆಂಗಳೂರು, ಏ. 30- ಒಂದು ಮಳೆಗೆ ಹಿಂಗಾದರೆ ಈ ಊರಲ್ಲಿ ಹೆಂಗಪ್ಪ ಜೀವನ ಸಾಗಿಸುದೋ ಅನ್ನೊ ಭೀತಿ ಸಿಲಿಕಾನ್‌ ಸಿಟಿ ಜನರನ್ನು ಕಾಡತೊಡಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಬೋರಿಂಗ್‌ ಆಸ್ಪತ್ರೆಯ ಗೊಡೆ ಕುಸಿದು 7 ಅಮಾಯಕ ಜೀವಗಳು ಬಲಿಯಾದ ನಂತರ ಅದ್ಯಾವ ರಸ್ತೆಯಲ್ಲಿ ಯಾವಾಗ ಏನಾಗುತ್ತೋ ಅನ್ನೋ ಭಯ ಇದೀಗ ನಗರ ಜನರನ್ನ ಕಾಡುತ್ತಿದೆ.

ಲಕ್ಷಾಂತರ ಹಣ ಹೂಡಿಕೆ ಮಾಡಿದ ವಾಹನಗಳಿಗೆ ಹಾನಿಯಾಗೋ ಭೀತಿ, ಕೋಟಿ ಕೊಟ್ಟರೂ ಸಿಗದ ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆ ಮತ್ತು ಬಿರು ಗಾಳಿಯಿಂದ ನಗರವೇ ಅಸ್ತವ್ಯಸ್ತಗೊಂಡಿತು. ಗಾರ್ಡನ್‌ ಸಿಟಿಯಲ್ಲಿ ರಸ್ತೆಗಳು ನದಿಗಳಂತಾಗಿ, ಅನೇಕ ಬಡಾವಣೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು.

ಸತತ ಎರಡು ಗಂಟೆಗಳ ಮಹಾಮಳೆಗೆ ಇಡಿ ನಗರ ತತ್ತರಿಸಿಹೋಗಿತ್ತು. ಅಂಡರ್‌ಪಾಸ್‌‍ಗಳು ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡರೆ, ಹಲವೆಡೆ ಕಾರು, ಬೈಕ್‌ಗಳು ಹಾನಿಗೀಡಾದವು.170ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ ಎಂದು ಅಂದಾಜಿಸಲಾಗಿದೆ.

ವಿಜಯನಗರ, ಆರ್‌.ಟಿ.ನಗರ, ಶೇಷಾದ್ರಿಪುರಂ, ಜಯನಗರ, ಚಾಮರಾಜಪೇಟೆ, ಕಬ್ಬನ್‌ ಪಾರ್ಕ್‌, ಜೆ.ಪಿ.ನಗರ, ಉಪ್ಪಾರ್‌ ಪೇಟೆ, ಹಲಸೂರು ಗೇಟ್‌‍, ವಿಲ್ಸನ್‌ ಗಾರ್ಡನ್‌‍, ಸದಾಶಿವನಗರ, ಮೈಕೋ ಲೇಔಟ್‌‍, ಹೈಗ್ರೌಂಡ್‌‍, ಮೋದಿ ರಸ್ತೆ, ಹಳೆಯ ಉದಯ ಟೀವಿ ಜಂಕ್ಷನ್‌‍, ಪ್ರೆಸಿಡೆಂಟ್‌ ಹೋಟೆಲ್‌‍, 46ನೇ ಕ್ರಾಸ್‌‍, ಬಿನ್ನಿಮಿಲ್‌ ರಸ್ತೆ, ಅಲಿ ಆಸ್ಗರ್‌ ರಸ್ತೆ, ಕ್ವಿನ್‌್ಸ ಸರ್ಕಲ್‌‍, 5ನೇ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಸಿದ್ದಯ್ಯ ರಸ್ತೆ, ಪ್ಯಾಲೆಸ್‌‍ ರಸ್ತೆಯ ಅಂಜನೇಯ ದೇವಸ್ಥಾನ ಸಮೀಪ, ಬಿಳೇಕಳ್ಳಿಯ ಸೋಮೇಶ್ವರ ದೇವಸ್ಥಾನದ ಸಮೀಪ, ಶ್ರೀರಾಮಮಂದಿರ ರಸ್ತೆ, ಕಲ್ಪನಾ ಜಂಕ್ಷನ್‌ ಸೇರಿದಂತೆ ಹಲವು ಕಡೆಗಳಲ್ಲಿ ಮರ ಮತ್ತು ಕೊಂಬೆಗಳು ಉರುಳಿ ಬಿದ್ದಿವೆ.

ಕೇಂದ್ರ ಪಾಲಿಕೆಯಲ್ಲಿ 57 ಮರ ಧರೆಗೆ:
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಮರಗಳು ಧರೆಗುರುಳಿವೆ. ಸಿವಿ ರಾಮನ್‌ ನಗರ, ಶಾಂತಿನಗರ, ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 57 ಮರಗಳು ಮತ್ತು 111 ಮರದ ರೆಂಬೆ-ಕೊಂಬೆಗಳು ನೆಲಸಮವಾಗಿವೆ. ಪಶ್ಚಿಮ ಪಾಲಿಕೆಯಲ್ಲಿ 45 ಮರಗಳು, 90 ರೆಂಬೆ -ಕೊಂಬೆಗಳು ಧರೆಗುರುಳಿವೆ.

ದಕ್ಷಿಣ ಪಾಲಿಕೆಯಲ್ಲಿ 19 ಮರ ಮತ್ತು 72 ಮರದ ರೆಂಬೆಗಳು ಬಿದ್ದಿವೆ. ಉತ್ತರ ಪಾಲಿಕೆಯಲ್ಲಿ 19 ಮರ ಮತ್ತು 57 ಮರದ ಕೊಂಬೆಗಳು ಬಿದ್ದಿವೆ. ಪೂರ್ವ ಪಾಲಿಕೆಯಲ್ಲಿ 2 ರೆಂಬೆಗಳು ನೆಲಕ್ಕುರುಳಿವೆ ಎಂದು ಜಿಬಿಎ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮರ ಬಿದ್ದ ಪ್ರದೇಶಗಳಲ್ಲಿ ಮರಗಳ ತೆರವು ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದ್ದಾರೆ.

ವಾಹನಗಳಿಗೆ ಭಾರಿ ನಷ್ಟ:
ಮಳೆಯೊಂದಿಗೆ ಬೀಸಿದ ಗಾಳಿಗೆ ನೂರಾರು ವಾಹನಗಳು ಜಖಂ ಗೊಂಡಿವೆ. ನಗರದ ಹಲವು ಪ್ರದೇಶದಲ್ಲಿ ದ್ವಿಚಕ್ರ. ಕಾರು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ವಾಹನಗಳ ಮೇಲೆ ಮರಗಳು ಬಿದ್ದಿವೆ. ಜಯನಗರ, ಬಸವನಗುಡಿ.ಸೇರಿದಂತೆ ಅನೇಕ ಪ್ರದೇಶಗಳಲ್ಲಿ ದೊಡ್ಡ ಮರಗಳು ಲೈಟ್‌ ಕಂಬಗಳ ಮೇಲೆ ಬಿದ್ದು ವಿದ್ಯುತ್‌ ವ್ಯತ್ಯಯ ಉಂಟಾಗಿದೆ. 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹಾನಿ:ವಿಜಯನಗರ, ಆರ್‌.ಟಿ.ನಗರ, ಶೇಷಾದ್ರಿಪುರಂ, ಜಯನಗರ, ಚಾಮರಾಜಪೇಟೆ, ಜೆಪಿ ನಗರ, ಸದಾಶಿವನಗರ ಸೇರಿದಂತೆ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು.

ಕೆಲವೆಡೆ ಮರ ತೆರವು ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಜನರು ಜಿಬಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮರ ಬಿದ್ದ ಬಳಿಕ ಅರ್ಧದಷ್ಟೇ ತೆರವು ಮಾಡಿ ಹೋಗುತ್ತಿರುವ ಅರೋಪ ಕೇಳಿಬಂದಿದೆ ಇತ್ತ ಫುಟ್‌ಪಾತ್‌ಗಳಲ್ಲಿ ಮರಗಳನ್ನು ಬಿಟ್ಟುಹೋಗುವುದರಿಂದ ಪಾದಚಾರಿಗಳಿಗೆ ತೊಂದರೆ ಅಂತ ಸಾರ್ವಜನಿಕರು ನಗರಪಾಲಿಕೆಗಳ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಂಟ್ರೋಲ್‌ ರೂಂಗೆ 800ಕ್ಕೂ ಹೆಚ್ಚು ದೂರುಗಳು;ಮಳೆಯಿಂದ ಜಿಬಿಎ ಹಾಗೂ 5 ನಗರಪಾಲಿಕೆ ಕಂಟ್ರೋಲ್‌ ರೂಮ್‌ ಗಳಿಗೆ ಸುಮಾರು 800 ಕ್ಕೂ ಹೆಚ್ಚು ಕರೆಗಳು ಬಂದಿದವು.ದೂರಗಳ ಇತ್ಯರ್ಥಕ್ಕೆ ಸಿಬ್ಬಂದಿ ಮತ್ತು ಯಂತ್ರೋಪಕರಣಗಳ ಕೊರತೆ ಸ್ಪಷ್ಟವಾಗಿ ಗೋಚರಿಸಿದವು. ಇತ್ತ ಜಿಬಿಎ ಕೇಂದ್ರ ಕಛೇರಿಯಲ್ಲಿ ಮರಗಳು ಧರೆಗೆ ಉರುಳಿ ಬಿದ್ದಿವೆ. ಇನ್ನೂ ಕಬ್ಬನ್‌ ಪಾರ್ಕ್‌ನಲ್ಲಿ 15 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕಬ್ಬನ್‌ ಪಾರ್ಕನ ಲೈಬ್ರರಿ ಸುತ್ತಮುತ್ತ ಇರುವ ಮರಗಳು ಧರೆಗೆ ಉರುಳಿ ಸಂಚಾರಕ್ಕೆ ತೊಂದರೆ ಅಗಿದೆ.

ಕಬ್ಬನ್‌ ಪಾರ್ಕಿನಲ್ಲಿ ಇರುವ ಸೆಂಚುರಿ ಕ್ಲಬ್‌ ಸಂಪೂರ್ಣ ಜಲವೃತವಾಗಿ ಪಾರ್ಕಿನಲ್ಲಿ ನಿಂತಿದ ಕಾರುಗಳು ಮುಳುಗಡೆ ಅಗಿದೆ. ಇತ್ತ ಎಂಜಿ ರಸ್ತೆಯಲ್ಲಿ ಇರುವ ಬ್ರಿಟಿಷ್‌ ಲೈಬ್ರರಿ ಕಟ್ಟಡದೊಳಗೆ ಮಳೆ ನೀರು ನುಗ್ಗಿ ಲಕ್ಷಾಂತರ ಬೆಲೆ ಬಾಳುವ ಪುಸ್ತಕಗಳು ಮಳೆಯ ನೀರಿನಿಂದ ಹಾಳಗಿವೆ ಎಂದು ವರದಿಯಾಗಿದೆ.

ಬೌರಿಂಗ್‌ ಆಸ್ಪತ್ರೆ ದುರಂತದಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿರುವ ಬೆನ್ನಲ್ಲೇ ರಕ್ಕಸ ರಣ ಮಳೆಗೆ ಮತ್ತೆರಡು ಜೀವಗಳು ಬಲಿಯಾಗಿವೆ. ಜೆ ಪಿ ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯ ಮಿನಿ ಫಾರೆಸ್ಟ್‌ ಬಳಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ವಿದ್ಯುತ್‌ ಕಂಬದ ಬಳಿ ದ್ವಿಚಕ್ರ ಪಾರ್ಕ ಮಾಡುವ ವೇಳೆ ಕರೆಂಟ್‌ ಶಾಕ್‌ ಹೊಡೆದು 30 ವರ್ಷದ ಯುವಕ ಸಾವನ್ನಪ್ಪಿದ್ದಾರೆ.

3 ದಿನ ಮಳೆ ಎಚ್ಚರಿಕೆ: ಹವಾಮಾನ ಇಲಾಖೆ ಇನ್ನೂ 3 ದಿನ ಮಳೆಯ ಎಚ್ಚರಿಕೆ ನೀಡಿದ್ದು, ನಗರ ಜನರಲ್ಲಿ ಆತಂಕ ಹೆಚ್ಚಾಗಿದೆ.ಒಟ್ಟಾರೆ ಮಳೆ ಬಂದರೆ ತಂಪು ಕೊಡಬೇಕಾದ ನಗರದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ.ಪ್ರತಿ ಮಳೆಗೂ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಪರಿಹಾರ ಕಾಣದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

RELATED ARTICLES

Latest News