ಕೊಪ್ಪಳ,ಏ.30- ಜಿಲ್ಲೆಯ ಗಂಗಾವತಿ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯವು 6 ಮಂದಿ ಆಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣದ ದೋಷಿಗಳಾಗಿದ್ದ ರವಿ (ಪ್ರಮುಖ ಆರೋಪಿ), ಅಲ್ತಾಫ್ ಬಳ್ಳಾರಿ, ಗಂಗಾಧರ್, ದಾದಾಪೀರ ಬಳ್ಳಾರಿ, ಮೈಲಾರಿ ವಿಜಯ್ ಮತ್ತು ಸಲೀಮ್ ಅವರಿಗೆ ಗಲ್ಲು ಶಿಕ್ಷೆ ಶಿಕ್ಷೆ ಹಾಗೂ 3 ಲಕ್ಷ ದಂಡವನ್ನು ವಿಧಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಧೀಶ ಸದಾನಂದಪ್ಪ ನಾಯ್ಕ ಅವರು ಪ್ರಕಟಿಸಿದರು.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ನಾಗಲಕ್ಷಿ ವಾದ ಮಂಡಿಸಿದ್ದರು.
ಇದೇ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೊಳಪಟ್ಟಿದ್ದ ಚೈತ್ರಾ, ಕಾರ್ತಿಕ್, ಭೀಮ್ ಭರತ್, ಧನರಾಜ್, ಶರಣಬಸವ್ ಅಲಿಯಾಸ್ ಹತ್ತು ರೊಟ್ಟಿ ಶರಣ ಮತ್ತು ಮಲ್ಲಿಕಾರ್ಜುನ ಡಿಜಿ ಮಲ್ಲಿ ಅವರುಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:
2025ರ ಅಕ್ಟೋಬರ್ 7ರಂದು ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ವೆಂಕಟೇಶ್ ಕುರುಬರ ಅವರನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಂತಕರು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕೊಲೆ ಪ್ರಕರಣ ಇಡೀ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ರಾಜಕಾರಣದಲ್ಲೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಘಟನೆ ನಡೆದ ನಂತರ ತನಿಖೆ ಕೈಗೆತ್ತಿಕೊಂಡ ಗಂಗಾವತಿ ನಗರ ಪೊಲೀಸರು, ಅತ್ಯಂತ ಚುರುಕಿನ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದರು.
ಕೊಲೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಗಂಗಾವತಿ ನಗರ ಪೊಲೀಸರು ಸುಮಾರು 927 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತನಿಖಾಧಿಕಾರಿಗಳು ವೈಜ್ಞಾನಿಕ ಪುರಾವೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರಕರಣದ ಆಳವಾದ ವಿಚಾರಣೆಗೆ ಸಹಕರಿಸಿದ್ದರು.
ಕೊಲೆಗೆ ಕಾರಣವೇನು?:
ವೆಂಕಟೇಶ್ ಕುರುಬರ ಕೊಲೆ ಕೇಸ್‌ನ ಎ1 ಆರೋಪಿಯಾಗಿದ್ದ ರವಿ ಅಕ್ಟೋಬರ್ 8 ರಂದು ಗಂಗಾವತಿಯಲ್ಲಿ ನಡೆದ ಹತ್ಯೆಗೆ ಸಂಚು ರೂಪಿಸಿದ್ದ. ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ್ ಕುರುಬರ್ (32) ತಡರಾತ್ರಿ ಊಟ ಮುಗಿಸಿ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ, ಕಾರಿನಲ್ಲಿ ಹಿಂಬಾಲಿಸಿದ ಐವರು ಯುವಕರ ಗುಂಪು, ಅವರ ಬೈಕ್‌ಗೆ ಗುದ್ದಿ ನೆಲಕ್ಕುರುಳುವಂತೆ ಮಾಡಿ, ಅವರು ಕೆಳಗೆ ಬಿದ್ದ ವೆಂಕಟೇಶ್ ಅವರ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶ್ ಅವರನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು, ವೆಂಕಟೇಶ್ ಅವರ ಚಲನವಲನಗಳನ್ನು ಗಮನಿಸಿದ್ದರು. ತಮ ಯೋಜನೆ ಪ್ರಕಾರ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಆದರೆ, ಆರೋಪಿಗಳು ಬಂದಿದ್ದ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ಆನೆಗೊಂದಿ ರಸ್ತೆಯ ಪಿಎಲ್‌ಡಿ ಬ್ಯಾಂಕ್ ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಗಂಗಾವತಿ ಶಹರ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದರು.
ಸ್ನೇಹಿತನ ಕೊಂದಿದ್ದಕ್ಕೆ ಸೇಡು :
ಕೊಲೆಯಾದ ಕೆಲವೇ ದಿನಕ್ಕೆ ಐವರು ಆರೋಪಿಗಳ ಪೈಕಿ ನಾಲ್ವರು ಭೀಮ್ ಅಲಿಯಾಸ್ ಭರತ್, ಸಲೀಂ, ವಿಜಯ್ ಹಾಗೂ ಧನರಾಜ್ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು. ಮತ್ತೊಬ್ಬ ಪರಾರಿಯಾಗಿದ್ದ ಎನ್ನಲಾಗಿತ್ತು. ಎರಡು ವರ್ಷಗಳ ಹಿಂದೆ ವೆಂಕಟೇಶನ ಸ್ನೇಹಿತ ಅಮರಭಗತ್ ಸಿಂಗ್ ಮಾರುತಿ ಅಲಿಯಾಸ್ ಸಲಗ ಎಂಬ ಯುವಕನ ಮೇಲೆ ಕಲ್ಲು ಎತ್ತಿಹಾಕಿದ್ದ. ಮಾರಣಾಂತಿಕವಾಗಿ ಗಾಯಗೊಂಡಿದ್ದ ಮಾರುತಿ ಎರಡು ವರ್ಷ ಕೋಮಾದಲ್ಲಿದ್ದ. ಸಾವು ಬದುಕಿನ ಹೋರಾಟದಲ್ಲಿದ್ದ ಆತ ಮೂರು ತಿಂಗಳ ಹಿಂದೆ ಮೃತಪಟ್ಟ ಇದರಿಂದ ಪ್ರಮುಖ ಆರೋಪಿ ಸಿಟ್ಟಾಗಿದ್ದ. ಒಳ್ಳೆಯ ದಿನ ಸರಿಯಾದ ಸಮಯ ನೋಡಿ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದ.
