ಹಾಸನ,ಮೇ 1- ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು ಏಳುಮಂದಿ ಮೃತಪಟ್ಟಿರುವ ಘಟನೆ ಹೃದಯವಿದ್ರಾವಕವಾಗಿದೆ. ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಂದ ಒಟ್ಟು ತಲಾ 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಘೋಷಿಸಿರುವ ಪರಿಹಾರ ಸಾಲುವುದಿಲ್ಲ. ರಾಜ್ಯಸರ್ಕಾರ ಕನಿಷ್ಠ 10 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದರು.
ಗೋಡೆ ಕುಸಿತದ ದುರಂತದ ದೃಶ್ಯ ನೋಡಿದರೆ ಹೊಟ್ಟೆ ಉರಿಯುತ್ತದೆ. ಆ ಗೋಡೆ ಪಕ್ಕದಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿದ್ದರು. ಈಗ ಆ ವ್ಯಾಪಾರಿಗಳು ಮೃತಪಟ್ಟಿರುವುದರಿಂದ ಅವರನ್ನೇ ಅವಲಂಬಿಸಿದ್ದ ಕುಟುಂಬಗಳು ಅನಾಥವಾಗಿವೆ ಎಂದು ಅವರು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ತಕ್ಷಣ ಮೂಲಸೌಕರ್ಯ ಒದಗಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜನರ ಪ್ರಾಣ ಉಳಿಸುವುದು ಮೊದಲ ಆದ್ಯತೆಯಾಗಬೇಕು. ಜನರಿಗೆ ಕುಡಿಯುವ ನೀರು ಒದಗಿಸಬೇಕು. ಮುಖ್ಯಮಂತ್ರಿ ಬದಲಾವಣೆ ಆಡಳಿತ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಮಾಡೋಣ. ಈಗ ಜನರ ಬದುಕು ಉಳಿಸುವತ್ತ ಗಮನ ಹರಿಸಬೇಕಿದೆ ಎಂದು ಅವರು ತಿಳಿಸಿದರು.
