ಬೆಂಗಳೂರು,ಮೇ 1- ಮಾರ್ಚ್‌ನಲ್ಲಿ ದುರ್ಬಲಗೊಂಡಿದ್ದ ಪೂರ್ವ ಮುಂಗಾರು ಕಳೆದ ಎರಡು-ಮೂರು ದಿನಗಳಿಂದ ಚೇತರಿಕೆ ಕಂಡಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ.
ನಿನ್ನೆ ಕೂಡಾ ಹಲವೆಡೆ ಗುಡುಗು, ಮಿಂಚು, ಆಲಿಕಲ್ಲು, ಬಿರುಗಾಳಿ ಸಹಿತ ಮಳೆಯಾಗಿದೆ. ಆದರೂ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದ್ದು, ಹಗಲಿನ ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗಿರಲಿದೆ. ಸಂಜೆ ಹಾಗೂ ರಾತ್ರಿ ವೇಳೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಧ್ಯಾಹ್ನದ ನಂತರ ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಟಿ.ನರಸೀಪುರ ತಾಲ್ಲೂಕಿನ ಕೇತುಪುರದಲ್ಲಿ 48 ಮಿ.ಮೀ., ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರಿನಲ್ಲಿ 48.5 ಮಿ.ಮೀ., ಮೈಸೂರಿನ ಜಯಪುರ, ನಂಜನಗೂಡು ತಾಲ್ಲೂಕಿನ ನೇರಳೆಯಲ್ಲಿ ತಲಾ 47 ಮಿ.ಮೀ., ನಂಜನಗೂಡು ತಾಲ್ಲೂಕಿನ ನಲ್ಲಿತಾಲಪುರ, ಹಾಸನ ಜಿಲ್ಲೆಯ ಮರ್ಕುಳಿ, ಗುಂಡ್ಲುಪೇಟೆ ತಾಲ್ಲೂಕಿನ ಬಚ್ಚಹಳ್ಳಿಯಲ್ಲಿ ತಲಾ 46.5 ಮಿ.ಮೀ., ಮಡಿಕೇರಿ ತಾಲ್ಲೂಕಿನ ಕೋಣಂಜಗೇರಿಯಲ್ಲಿ 44.5 ಮಿ.ಮೀ., ಮಧುಗಿರಿ ತಾಲ್ಲೂಕಿನ ರಂಟವಾಳಲುವಿನಲ್ಲಿ 44 ಮಿ.ಮೀ., ಗುಂಡ್ಲುಪೇಟೆ ತಾಲ್ಲೂಕಿನ ಬಾರಗಿ, ಚನ್ನಪಟ್ಟಣ ತಾಲ್ಲೂಕಿನ ಮಾಕಳಿಯಲ್ಲಿ ತಲಾ 43.5 ಮಿ.ಮೀ., ಬೆಂಗಳೂರು ದಕ್ಷಿಣದಲ್ಲಿ 42.6 ಮಿ.ಮೀ., ರಾಮನಗರ ತಾಲ್ಲೂಕಿನ ಜಾಲಮಂಗಲದಲ್ಲಿ 42 ಮಿ.ಮೀ., ಸುತ್ತೂರು, ಸಾಲಿಗ್ರಾಮ ಮುಂಜನಹಳ್ಳಿಯಲ್ಲಿ ತಲಾ 41.5 ಮಿ.ಮೀ., ಆನೇಕಲ್ ತಾಲ್ಲೂಕಿನ ಮುತ್ಯಾನಲ್ಲೂರುವಿನಲ್ಲಿ 41 ಮಿ.ಮೀ., ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಾಮನಹಳ್ಳಿಯಲ್ಲಿ 40.5 ಮಿ.ಮೀ., ಮುಳಬಾಗಿಲು ತಾಲ್ಲೂಕಿನ ಆಲಂಗೂರಿನಲ್ಲಿ 40 ಮಿ.ಮೀ., ಚಾಮರಾಜನಗರ ಜಿಲ್ಲೆಯ ನವಿಲೂರು, ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿಯಲ್ಲಿ ತಲಾ 39.5 ಮಿ.ಮೀ., ಹೆಗ್ಗಡದೇವನಕೋಟೆ ತಾಲ್ಲೂಕಿನ ತುಂಬಸೋಗೆ, ಟಿ ನರಸೀಪುರ ತಾಲ್ಲೂಕಿನ ಮಲಿಯೂರು, ಶಿರಾ ತಾಲ್ಲೂಕಿನ ಕೋಟ್ಲದಲ್ಲಿ ತಲಾ 39 ಮಿ.ಮೀ., ಗುಂಡ್ಲುಪೇಟೆ ತಾಲ್ಲೂಕಿನ ಹುಂಡಿಪುರ, ಆನೇಕಲ್ ಬನ್ನೇರುಘಟ್ಟದಲ್ಲಿ ತಲಾ 38.5 ಮಿ.ಮೀ., ಹಾಗೂ ಗುಡಿಬಂಡೆ ತಾಲ್ಲೂಕಿನ ತಿರುಮಣಿಯಲ್ಲಿ 38 ಮಿ.ಮೀ., ನಷ್ಟು ಮಳೆಯಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯಾದ್ಯಂತ ಅಲ್ಲಲ್ಲಿ ಚದುರಿದಂತೆ ಗುಡುಗು, ಸಿಡಿಲು, ಮಿಂಚಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಕೆಲವೆಡೆ ಆಲಿಕಲ್ಲು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ. ಅದರಲ್ಲೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು ಆಲಿಕಲ್ಲು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಇನ್ನೂ ಒಂದು ವಾರ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಗಳು ಕಂಡುಬರುತ್ತಿವೆ. ಆದರೆ ನಾಳೆಯಿಂದ ಮಳೆಯ ಪ್ರಮಾಣ ಇಳಿಮುಖವಾಗಲಿದ್ದು, ಭಾರೀ ಮಳೆಯಾಗುವ ಸಾಧ್ಯತೆಗಳು ವಿರಳ.
