Thursday, April 16, 2026
Homeರಾಜ್ಯಶಾಸ್ತ್ರೋಕ್ತವಾಗಿ ಸಮಾಪ್ತಿಗೊಂಡ ವಿಶ್ವ ವಿಖ್ಯಾತ ಕರಗ ಉತ್ಸವ

ಶಾಸ್ತ್ರೋಕ್ತವಾಗಿ ಸಮಾಪ್ತಿಗೊಂಡ ವಿಶ್ವ ವಿಖ್ಯಾತ ಕರಗ ಉತ್ಸವ

World-famous Karaga festival concludes with ceremony

ಬೆಂಗಳೂರು, ಏ.2- ವಿಶ್ವ ವಿಖ್ಯಾತ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವವು ಶಾಸ್ತ್ರೋಕ್ತವಾಗಿ ಸಮಾಪ್ತಿಯಾಗಿದೆ. ಕಳೆದ ರಾತ್ರಿ 2.10 ಗಂಟೆಗೆ ಕರಗ ಮಹೋತ್ಸವಕ್ಕೆ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆತಿದ್ದು, ಬಿಬಿಎಂಪಿ, ಪೊಲೀಸ್‌‍ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ಸಮರ್ಪಕ ಸಿದ್ಧತೆಗಳ ನಡುವೆ ಯಶಸ್ವಿಯಾಗಿ ನೆರವೇರಿತು.

ಈ ಬಾರಿ ಕರಗ ಉತ್ಸವದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು. ಐತಿಹಾಸಿಕ ಬೆಂಗಳೂರು ಧರ್ಮರಾಯಸ್ವಾಮಿ ದ್ರೌಪದಿ ಕರಗ ಉತ್ಸವ ಈ ವರ್ಷವೂ ಅದ್ದೂರಿಯಾಗಿ ಜರುಗಿದ್ದು, ಕಳೆದೊಂದು ವಾರದಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದ್ದವು.

ಧರ್ಮರಾಯಸ್ವಾಮಿ ದೇವಸ್ಥಾನವು ನವವಧುವಿನಂತೆ ಅಲಂಕರಿಸಿಕೊಂಡು ಕಂಗೊಳಿಸುತ್ತಿತ್ತು.ಕರಗ ಸಾಗಿದ ಮಾರ್ಗದ ಮೂಲಕ ಭಕ್ತರು ರಾತ್ರಿ ಪೂರ್ತಿ ಜಾಗರಣೆ ಮಾಡಿ ದೇವಿಯನ್ನು ಕಣ್ಣುತುಂಬಿಕೊಂಡರು. ಈ ಬಾರಿಯೂ ಜ್ಞಾನೇಂದ್ರ ಅವರು ಕರಗ ಹೊತ್ತಿದ್ದು, ಯಾವುದೇ ಅಡ್ಡಿ ಆತಂಕಗಳಿಲ್ಲದೆ ಉತ್ಸವ ಸುಸೂತ್ರವಾಗಿ ನೆರವೇರಿತು.

ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮಧ್ಯರಾತ್ರಿ 2.10ಕ್ಕೆ ಹೊರಟ ಕರಗವು ವಿವಿಧ ಪೇಟೆಗಳನ್ನು ಸುತ್ತಿ, ಮಸ್ತಾನ್‌ ಷಾ ದರ್ಗಾ, ಅಣ್ಣಮ್ಮ ದೇವಸ್ಥಾನ
ಸೇರಿದಂತೆ ಒಟ್ಟು 26 ದೇವಸ್ಥಾನಗಳಿಗೆ ದರ್ಶನ ನೀಡಿ ಇಂದು ಬೆಳಿಗ್ಗೆ 9.50ಕ್ಕೆ ಮರಳಿ ದೇವಸ್ಥಾನಕ್ಕೆ ಆಗಮಿಸಿತು.ಒಟ್ಟಾರೆ, ಈ ಬಾರಿಯ ಬೆಂಗಳೂರು ಕರಗ ಮಹೋತ್ಸವ ಭಕ್ತಿಭಾವ ಮತ್ತು ಸಂಭ್ರಮದ ನಡುವೆ ಅದ್ದೂರಿಯಾಗಿ ಜರುಗಿದ್ದು, ಲಕ್ಷಾಂತರ ಭಕ್ತರು ದ್ರೌಪದಿ ಕರಗವನ್ನು ಕಣ್ತುಂಬಿಕೊಂಡರು.

ಶಾಂತಿಯುತವಾಗಿ ನೆರವೇರಿದ ಕರಗ ಮಹೋತ್ಸವ..

ಬೆಂಗಳೂರು,ಏ.2- ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಶಾಂತಿಯುತವಾಗಿ ನೆರವೇರಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮಧ್ಯರಾತ್ರಿಯಿಂದ ಇಂದು ಬೆಳಗ್ಗೆ 9.30 ರಿಂದ 10 ಗಂಟೆಯವರೆಗೂ ಕರಗ ಮೆರವಣಿಗೆ ನಡೆದಿದೆ. ಎಲ್ಲಿಯೂ ಸಣ್ಣ ಪುಟ್ಟ ಘಟನೆ ನಡೆಯದಂತೆ ಪೊಲೀಸರು ಕರ್ತವ್ಯ ನಿರ್ವಹಿಸಿ ದ್ದಾರೆ ಎಂದು ಹೇಳಿದರು.

ನಮ ಅಧಿಕಾರಿಗಳು ರೂಟ್‌ಮ್ಯಾಪ್‌ ಸರಿಯಾಗಿ ಮಾಡಿದ್ದರು. ಅದರಂತೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ. ಮೂವರು ಡಿಸಿಪಿ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ಅಧಿಕಾರಿಗಳು ಹಾಗೂ ಸಿಬ್ಬಂದಿ ಅಚ್ಚುಕಟ್ಟಾಗಿ ಕರ್ತವ್ಯ ನಿಭಾಯಿಸಿದ್ದಾರೆ. ನಗರದ ಜನತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿದ್ದಾರೆ.ನಗರದ ಜನತೆಗೂ ಹಾಗೂ ಪೊಲೀಸ್‌‍ ಸಿಬ್ಬಂದಿಗೂ ಆಯುಕ್ತರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

Latest News