Thursday, April 16, 2026
Homeಬೆಂಗಳೂರುಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಮೆಗಾ ಪ್ಲಾನ್‌ : 35 ಫ್ಲೈ ಓವರ್‌, 25 ಅಂಡರ್‌ಪಾಸ್‌‍, 101...

ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಮೆಗಾ ಪ್ಲಾನ್‌ : 35 ಫ್ಲೈ ಓವರ್‌, 25 ಅಂಡರ್‌ಪಾಸ್‌‍, 101 ಸ್ಕೈ ವಾಕ್‌ ನಿರ್ಮಾಣ

Mega plan for Bengaluru traffic management: Construction of 35 flyovers, 25 underpasses, 101 sky walks

ಬೆಂಗಳೂರು, ಏ.8- ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಕಂಟ್ರೋಲ್‌ಗೆ ಜಿಬಿಎ ಹಾಗೂ ಸಂಚಾರಿ ಪೊಲೀಸರು ಮಾಸ್ಟರ್‌ ಪ್ಲಾನ್‌ ರೂಪಿಸಿದ್ದಾರೆ. 35 ಫ್ಲೈ ಓವರ್‌, 25 ಅಂಡರ್‌ಪಾಸ್‌‍, 101 ಸ್ಕೈ ವಾಕ್‌ ನಿರ್ಮಾಣ ಮಾಡುವ ಮೂಲಕ ಸಿಲಿಕಾನ್‌ ಸಿಟಿಗೆ ತಲೆನೋವಾಗಿರುವ ಸಂಚಾರ ದಟ್ಟಣೆಗೆ ಮುಕ್ತಿ ಹಾಡಲು ಮುಂದಾಗಿದ್ದಾರೆ.

ನಗರದ ಟ್ರಾಫಿಕ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 35 ಫ್ಲೈಓವರ್‌ಗಳು, 25 ಅಂಡರ್‌ಪಾಸ್‌‍ ಹಾಗೂ 101 ಸ್ಕೈ ವಾಕ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಪ್ರತಿದಿನ ನಗರ ರಸ್ತೆಗಳ ಮೇಲೆ ಸುಮಾರು 2 ಸಾವಿರ ಹೊಸ ವಾಹನಗಳು ಸೇರ್ಪಡೆಯಾಗುತ್ತಿರುವ ಹಿನ್ನೆಲೆ, ಸಂಚಾರದ ಒತ್ತಡ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬೃಹತ್‌ ಬೆಂಗಳೂರು ಪ್ರಾಧಿಕಾರಕ್ಕೆ ಸಲ್ಲಿಸಿರುವ ಈ ಯೋಜನೆ ನಗರ ಸಂಚಾರ ವ್ಯವಸ್ಥೆಯೇ ಬದಲಿಸುವ ಮಟ್ಟದ ಬೃಹತ್‌ ಬ್ಲೂಪ್ರಿಂಟ್‌ ಎಂದು ಹೇಳಲಾಗುತ್ತಿದೆ.

ಪೂರ್ವ ಬೆಂಗಳೂರಿಗೆ ಹೆಚ್ಚಿನ ಆದ್ಯತೆ: ಮಹದೇವಪುರ, ವೈಟ್‌ಫೀಲ್ಡ್‌‍ ಸೇರಿದಂತೆ ಪೂರ್ವ ಬೆಂಗಳೂರಿನ ಭಾಗಗಳಲ್ಲಿ ಟ್ರಾಫಿಕ್‌ ಒತ್ತಡ ಹೆಚ್ಚಿರುವುದರಿಂದ ಈ ಪ್ರದೇಶಗಳಲ್ಲಿ ಹೆಚ್ಚು ಫ್ಲೈಓವರ್‌ ಹಾಗೂ ಪಾದಚಾರಿ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ.ಇನ್ನು ಹೆಬ್ಬಾಳ, ಸಾರಕ್ಕಿ ಸರ್ಕಲ್‌‍, ಬನ್ನೇರುಘಟ್ಟ ರಸ್ತೆಯ ದಾಲ್ಮಿಯಾ ಜಂಕ್ಷನ್‌ ಸೇರಿ 25 ಪ್ರಮುಖ ಜಂಕ್ಷನ್‌ಗಳನ್ನು ಅಂಡರ್‌ಪಾಸ್‌‍ ಮೂಲಕ ಸಿಗ್ನಲ್‌ ಫ್ರೀ ಮಾಡಲು ಯೋಜನೆ ರೂಪಿಸಲಾಗಿದೆ.

ಹೊಸ ಫ್ಲೈಓವರ್‌ ಎಲ್ಲೆಲ್ಲಿ? ವರ್ತೂರು ಕೋಡಿ, ದೊಮ್ಮಸಂದ್ರ, ಗುಂಜೂರು, ಎಚ್‌ಎಎಲ್‌‍ ಹಳೇ ವಿಮಾನ ನಿಲ್ದಾಣ ರಸ್ತೆ ಹಾಗೂ ಯಲಹಂಕ ಭಾಗಗಳಲ್ಲಿ ಹೊಸ ಫ್ಲೈಓವರ್‌ಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ.

ನಗರದಲ್ಲಿ ವರ್ಷಕ್ಕೆ ಸುಮಾರು 200 ಪಾದಚಾರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಪಾದಚಾರಿ ಸುರಕ್ಷತೆಗೆ ಆದ್ಯತೆ ನೀಡಿ 101 ಹೊಸ ಸ್ಕೈವಾಕ್‌ ನಿರ್ಮಾಣ ಅನಿವಾರ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೇನು ಕ್ರಮಗಳು? 103 ಬಸ್‌‍ ನಿಲ್ದಾಣಗಳ ಸ್ಥಳಾಂತರ, 63 ಹೊಸ ಬಸ್‌‍ ಬೇಗಳ ನಿರ್ಮಾಣ, ಅವೈಜ್ಞಾನಿಕ 84 ಸ್ಪೀಡ್‌ ಬ್ರೇಕರ್‌ಗಳ ತೆರವು, ನೀರು ನಿಲ್ಲುವ 137 ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಈ ಯೋಜನೆ ಅತ್ಯಂತ ಸಮಗ್ರ ಆಡಿಟ್‌ ವರದಿ ಆಧಾರಿತವಾಗಿದ್ದು, ಭೂಸ್ವಾಧೀನ ಮತ್ತು ಹಣಕಾಸಿನ ವ್ಯವಸ್ಥೆ ದೊಡ್ಡ ಸವಾಲಾಗಲಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ತಿಳಿಸಿದ್ದಾರೆ.

ಜೊತೆಗೆ ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಟ್ರಾಫಿಕ್‌ ಜಾಮ್‌ನಿಂದ ಬಳಲುತ್ತಿರುವ ಬೆಂಗಳೂರಿಗರಿಗೆ ಇದು ದೊಡ್ಡ ನಿರೀಕ್ಷೆ ಮೂಡಿಸಿದ ಯೋಜನೆಯಾದರೂ, ಜಾರಿಯಾಗುವ ವೇಗ ಮತ್ತು ಅನುಷ್ಠಾನದ ಸ್ಪಷ್ಟತೆ ಈಗ ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

Latest News