ಬೆಂಗಳೂರು, ಏ.8- ಕಳೆದೆರಡು ವರ್ಷಗಳಲ್ಲಿ ಜಾರಿಗೊಳಿಸಿರುವ ಜಲಸಂರಕ್ಷಣಾ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಂತರ್ಜಲ ಮರುಪೂರಣ ಸಾಮರ್ಥ್ಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹಾಗೆಯೇ, ಉತ್ತಮ ಮಳೆ ಹಾಗೂ ಜನಜಾಗೃತಿ ಅಭಿಯಾನದ ಪರಿಣಾಮವಾಗಿ ಅಂತರ್ಜಲ ಬಳಕೆಯಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ವಿಕಾಸಸೌಧದ ತಮ ಕಚೇರಿಯಲ್ಲಿ 2025 ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಆದಂತಹ ಉತ್ತಮ ಮಳೆ ಹಾಗೂ ಸರ್ಕಾರದ ಭದ್ರ ಜಲ ಸಂರಕ್ಷಣಾ ನೀತಿಗಳ ಯಶಸ್ಸಿನ ಫಲವಾಗಿ, ಕರ್ನಾಟಕವು ಅಂತರ್ಜಲ ಸೂಚ್ಯಂಕಗಳಲ್ಲಿ ಗಮನಾರ್ಹ ಸುಧಾರಣೆಯನ್ನು ದಾಖಲಿಸಿದೆ. ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆಯಾಗಿ ಅಂತರ್ಜಲ ಬಳಕೆಯು ಗಣನೀಯವಾಗಿ ಇಳಿಕೆಯಾಗಿದ್ದು, ವಾರ್ಷಿಕವಾಗಿ ಅಂತರ್ಜಲ ಮರುಪೂರಣ ಸಾಮರ್ಥ್ಯದಲ್ಲಿ ಭಾರಿ ಏರಿಕೆಯಾಗಿದೆ ಎಂದರು.
ಈ ವರದಿಯ ಪ್ರಕಾರ, ರಾಜ್ಯದ ಒಟ್ಟಾರೆ ಅಂತರ್ಜಲ ಪ್ರಮಾಣದ ಬಳಕೆಯು 2024ರಲ್ಲಿದ್ದ ಶೇ.68.44 ರಿಂದ 2025ರಲ್ಲಿ ಶೇ.66.49 ಕ್ಕೆ ಇಳಿಕೆಯಾಗಿರುವುದು ಕಂಡುಬಂದಿದೆ. ಈ ಸಕಾರಾತಕ ಇಳಿಕೆಯು, ರಾಜ್ಯದಾದ್ಯಂತ ಲಭ್ಯವಿರುವ ವಾರ್ಷಿಕ ಅಂತರ್ಜಲದಲ್ಲಿ ಸರಾಸರಿ ಶೇ.65 ರಷ್ಟನ್ನು ಮಾತ್ರ ಪ್ರಸ್ತುತ ಬಳಸಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅಂತರ್ಜಲದ ಜವಾಬ್ದಾರಿಯುತ ಬಳಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಲಾಖೆಯು ನಿರಂತರವಾಗಿ ನಡೆಸುತ್ತಿರುವ ವ್ಯಾಪಕ ಪ್ರಯತ್ನಗಳು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಸುಸ್ಥಿರ ಬಳಕೆ ಹಾಗೂ ನೈಸರ್ಗಿಕ ಅಂತರ್ಜಲ ಮೂಲಗಳ ಮೇಲಿನ ಒತ್ತಡ ಕಡಿಮೆಯಾಗಿದೆ.
ಇದಕ್ಕೆ ಪೂರಕವಾಗಿ, ಕರ್ನಾಟಕದ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಒಟ್ಟು ವಾರ್ಷಿಕ ಅಂತರ್ಜಲ ಮರುಪೂರಣ ಪ್ರಮಾಣವು 2024 ರಲ್ಲಿದ್ದ 18.74ಬಿಲಿಯನ್ ಕ್ಯೂಬಿಕ್ ಮೀಟರ್‌ನಿಂದ 2025ರಲ್ಲಿ 19.28 ಬಿಸಿಎಂಗೆ ಗಮನಾರ್ಹವಾಗಿ ಏರಿಕೆಯಾಗಿದೆ. ಈ ಮರುಪೂರಣ ಪ್ರಮಾಣ ಹೆಚ್ಚಳದ ನೇರ ಪರಿಣಾಮವಾಗಿ, ವಾರ್ಷಿಕ ಲಭ್ಯವಿರುವ ಅಂತರ್ಜಲ ಸಂಪನೂಲವು 16.88ಬಿಸಿಎಂನಿಂದ 17.41 ಬಿಸಿಎಂಗೆ ಏರಿಕೆಯಾಗಿದೆ.
ರಾಜ್ಯದಾದ್ಯಂತ ಮೂಲಸೌಕರ್ಯಗಳಲ್ಲಿ ಮೇಲ್ದರ್ಜೆಗೇರಿಕೆಯಾಗಿರುವುದು ಈ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಜಲ ಸಂರಕ್ಷಣಾ ರಚನೆಗಳಿಂದ ಆಗುವ ಅಂತರ್ಜಲ ಮರುಪೂರಣ 2024ರಲ್ಲಿದ್ದ 0.81 ಬಿಸಿಎಂ ನಿಂದ 2025ರಲ್ಲಿ 1.04 ಬಿಸಿಎಂಗೆ ಏರಿಕೆಯಾಗಿದ್ದು, ಶೇ.29.11 ರಷ್ಟು ಜಿಗಿತ ಕಂಡಿದೆ.
ಕಳೆದ ಒಂದು ವರ್ಷದಲ್ಲಿ ರಾಜ್ಯದಾದ್ಯಂತ ಇಂತಹ ಜಲಸಂರಕ್ಷಣಾ ಕಾಮಗಾರಿಗಳ ಸಂಖ್ಯೆ 3,15,284 ರಿಂದ 3,94,060 ಕ್ಕೆ ಏರಿಕೆಯಾಗಿರುವುದು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಮಾಹಿತಿ ನೀಡಿದರು. ಗೃಹಬಳಕೆಯ ಅಂತರ್ಜಲ ಹೊರತೆಗೆಯುವಿಕೆ ಶೇ.0.58ರಷ್ಟು ಕಡಿತಗೊಂಡಿದ್ದು, 2024ರಲ್ಲಿದ್ದ 1,21,731 ಹೆಕ್ಟೇರ್ ಮೀಟರ್ ನಿಂದ 2025ರಲ್ಲಿ 1,21,023 ಹೆ.ಮೀ.ಗೆ ಇಳಿಕೆಯಾಗಿದೆ.
ಜಲ ಜೀವನ್ ಮಿಷನ್ ಯೋಜನೆಯಡಿ ಜನರು ಅಂತರ್ಜಲದ ಬದಲಾಗಿ ಮೇಲೈ ನೀರಿನ ಮೂಲಗಳತ್ತ ಯಶಸ್ವಿಯಾಗಿ ಮುಖಮಾಡಿರುವುದು ಈ ಕಡಿತಕ್ಕೆ ಪ್ರಮುಖ ಕಾರಣವಾಗಿದೆ ಎಂದರು. ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ ಪವಿತ್ರ, ಕೇಂದ್ರ ಅಂತರ್ಜಲ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
