ಬೆಂಗಳೂರು. ಏ.8- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ವಿರುದ್ಧ ಅಸ್ಸಾಂನ ಮುಖ್ಯ ಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ ಎಂದು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ಅವರು, ಖರ್ಗೆ ಅವರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿಯವರು ನೀಡಿರುವ ಅವಮಾನಕಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಖರ್ಗೆ ಅವರು ದಶಕಗಳ ಕಾಲ ಸಾರ್ವಜನಿಕ ಜೀವನಕ್ಕೆ ಸಮರ್ಪಿತರಾದ ಹಿರಿಯ ರಾಜಕಾರಣಿಗಳು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಮಹತ್ವದ ಪರಂಪರೆ ಮತ್ತು ಜವಾಬ್ದಾರಿಯ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಹುದ್ದೆಯನ್ನು ಮಹಾತ್ಮ ಗಾಂಧೀಜಿ ಅವರೂ ನಿರ್ವಹಿಸಿದ್ದರು. ಇಂತಹ ಗೌರವಾನ್ವಿತ ನಾಯಕರ ವಿರುದ್ಧ ಬಳಸಿರುವ ಭಾಷೆ ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಮಂತ ಬಿಸ್ವ ಶರ್ಮ ಅವರ ಹೇಳಿಕೆಗಳು ದೇಶದ ರಾಜಕೀಯದಲ್ಲಿನ ಚರ್ಚೆಯ ಗೌರವವನ್ನು ಕುಗ್ಗಿಸುತ್ತದೆ. ಅವಹೇಳನಕಾರಿಯಾಗಿ ಮಾತನಾಡಿ ರುವ ಹಿಮಂತ ಬಿಸ್ವ ಶರ್ಮ ಅವರು ತಕ್ಷಣವೇ ಯಾವುದೇ ಷರತ್ತಿಲ್ಲದೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
