Tuesday, April 14, 2026
Homeಬೆಂಗಳೂರುಬೆಂಗಳೂರಲ್ಲಿ ರಣಬಿಸಿಲು, ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲು

ಬೆಂಗಳೂರಲ್ಲಿ ರಣಬಿಸಿಲು, ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲು

Bengaluru records scorching heat, higher than usual temperatures

ಬೆಂಗಳೂರು, ಏ.9- ಸಿಲಿಕಾನ್‌ ಸಿಟಿಯಲ್ಲಿ ಏಪ್ರಿಲ್‌ ತಿಂಗಳ ಆರಂಭದಲ್ಲೇ ತೀವ್ರ ಬಿಸಿಲಿನ ತಾಪ ಕಾಣಿಸಿಕೊಂಡಿದೆ. ನಗರದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ 35.2 ಡಿಗ್ರಿ ಸೆಲ್ಸಿಯಸ್‌‍ ತಾಪಮಾನ ದಾಖಲಾಗಿದ್ದು, ಇದು ವಾಡಿಕೆಗಿಂತ ಸುಮಾರು 1.5 ಡಿಗ್ರಿ ಹೆಚ್ಚು ಎಂದು ವರದಿಯಾಗಿದೆ.

ಏಪ್ರಿಲ್‌ನಲ್ಲಿ ಬೆಂಗಳೂರಿನ ಗರಿಷ್ಠ ಉಷ್ಣಾಂಶ ಸಾಮಾನ್ಯವಾಗಿ ಸುಮಾರು 32ರಿಂದ 33 ಡಿಗ್ರಿ ಇರಬಹುದು ಎನ್ನಲಾಗುತ್ತದೆ. ನಗರದ ಹೆಚ್‌ಎಎಲ್‌‍ ಏರ್ಪೋರ್ಟ್‌ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಗಳಲ್ಲಿ ಕೂಡ 35 ಡಿಗ್ರಿ ಸೆಲ್ಸಿಯಸ್‌‍ ತಾಪಮಾನ ದಾಖಲಾಗಿದ್ದು, ಬಿಸಿಲಿನ ತೀವ್ರತೆ ಜನರನ್ನು ಕಂಗೆಡಿಸಿದೆ.

ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲೂ ಬಿಸಿಲಿನ ಕಾವು ಹೆಚ್ಚಾಗಿದ್ದು, ಕಲ್ಬುರ್ಗಿಯಲ್ಲಿ 39.2 ಡಿಗ್ರಿ, ರಾಯಚೂರಲ್ಲಿ 38.4 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇನ್ನು ವಿಜಯಪುರ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ 37 ಡಿಗ್ರಿಗೂ ಹೆಚ್ಚು ತಾಪಮಾನ ದಾಖಲಾಗಿರುವುದು ಆತಂಕ ಹೆಚ್ಚಿಸಿದೆ.

ರಾಜ್ಯದ ಹಲವೆಡೆ ಈ ವಾರ ಮಧ್ಯ-ಮೂವತ್ತರ ಡಿಗ್ರಿ ತಾಪಮಾನ ಕಂಡುಬರುತ್ತಿದೆ.ಏಪ್ರಿಲ್‌ ಮೊದಲ ವಾರದಲ್ಲೇ ಉಷ್ಣಾಂಶ ಏರಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಧ್ಯಾಹ್ನ ಸಮಯದಲ್ಲಿ ಅಗತ್ಯವಿಲ್ಲದ ಹೊರ ಸಂಚಾರ ತಪ್ಪಿಸಿ, ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.

RELATED ARTICLES

Latest News