Homeರಾಜಕೀಯಸಿಎಂ ಕುರ್ಚಿ ಕದನ, ಖಜಾನೆ ಲೂಟಿ : ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಸಿಎಂ ಕುರ್ಚಿ ಕದನ, ಖಜಾನೆ ಲೂಟಿ : ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

CM chair fight, treasury loot: Modi attacks state government

ಬೆಂಗಳೂರು,ಮೇ10- ಕರ್ನಾಟಕ ಕಾಂಗ್ರೆಸ್‌‍ ಸರ್ಕಾರದ ಒಳಜಗಳ ಮತ್ತು ನಾಯಕತ್ವವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರಮೋದಿಯವರು, ಇಲ್ಲಿನ ಮುಖ್ಯಮಂತ್ರಿ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ಎಂಬುದು ಗೊತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರಿಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಿಜೆಪಿ ವತಿಯಿಂದ ಹಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ಕರ್ನಾಟಕದ ಅಧಿಕಾರ ಹಂಚಿಕೆ, ಬಿಕ್ಕಟ್ಟು, ಆಡಳಿತ ವೈಫಲ್ಯ, ಭ್ರಷ್ಟಾಚಾರದ ಬಗ್ಗೆ ಉಲ್ಲೇಖ ಮಾಡಿದರು.

ಮೊದಲಿಗೆ ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ
ಆರಂಭಿಸಿದ ಮೋದಿಯವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ. ಇಲ್ಲಿನ ಖಜಾನೆ ಮಾತ್ರ ಲೂಟಿಯಾಗುತ್ತಿದೆ ಎಂದು ಆರೋಪಿಸಿದರು.

ಜನರ ಸಮಸ್ಯೆ ಪರಿಹರಿಸುವ ಬದಲು ಕಾಂಗ್ರೆಸ್‌‍ ಸರ್ಕಾರ ಮೂರು ವರ್ಷಗಳಿಂದ ನಾಯಕತ್ವ ಗೊಂದಲವನ್ನು ಬಗೆಹರಿಸುವಲ್ಲೇ ಸಮಯ ಕಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವಿನ ನಾಯಕತ್ವ ಚರ್ಚೆಯನ್ನು ಉಲ್ಲೇಖಿಸಿದ ಅವರು, ಮುಖ್ಯಮಂತ್ರಿ ಎಷ್ಟು ದಿನ ಹುದ್ದೆಯಲ್ಲಿರುತ್ತಾರೆ ಎಂಬುದನ್ನೂ ಕಾಂಗ್ರೆಸ್‌‍ನಿಂದ ನಿರ್ಧರಿಸಲಾಗುತ್ತಿಲ್ಲ. ಮತ್ತೊಬ್ಬರಿಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಿಲ್ಲ. ಎಲ್ಲವೂ ತೂಗುಹಗ್ಗದಲ್ಲಿ ಸಿಲುಕಿದೆ ಎಂದು ವ್ಯಂಗ್ಯವಾಡಿದರು.

ಜನರಿಗೆ ದ್ರೋಹ ಮಾಡುವುದೇ ಕಾಂಗ್ರೆಸ್‌‍ನ ಕೆಲಸವಾಗಿದೆ. ಅವರು ಸುಳ್ಳು. ಅವರ ಗ್ಯಾರಂಟಿಗಳೂ ಸುಳ್ಳು. ಕಾಂಗ್ರೆಸ್‌‍ ಅಧಿಕಾರದ ಪುಸ್ತಕದಲ್ಲಿ ಆಡಳಿತ ಎಂಬ ಅಧ್ಯಾಯವೇ ಇಲ್ಲ ಎಂದು ಟೀಕೆ ಮಾಡಿದರು.

ಅಧಿಕಾರದ ಆಸೆಗಾಗಿ ಯಾವುದೇ ಪಕ್ಷದೊಳಗೆ ಓಡಿಹೋಗುವ, ನಂಬಿದವರಿಗೆ ಕೈಕೊಡುವ, ಡಿಎಂಕೆ ಬೆನ್ನಿಗೆ ಚೂರಿ ಹಾಕಿರುವ ಕಾಂಗ್ರೆಸ್‌‍ ಪಕ್ಷವನ್ನು ಯಾರೊಬ್ಬರೂ ನಂಬಬಾರದು. ತಮಿಳುನಾಡಿನ ಈಗಿನ ಪರಿಸ್ಥಿತಿ ನೋಡಿ. 30 ವರ್ಷಗಳಿಂದ ಕಾಂಗ್ರೆಸ್‌‍ ಜೊತೆ ಡಿಎಂಕೆ ನಿಕಟ ಸಂಬಂಧ ಹೊಂದಿತ್ತು. 2014ರಿಂದ ಪಕ್ಷ ಉಳಿದಿದ್ದೇ ಮೈತ್ರಿ ಕಾರಣಕ್ಕಾಗಿ. ಅಧಿಕ್ಕಾರ ಕಳೆದುಕೊಳ್ಳುತ್ತಿದ್ದಂತೆ ಕಾಂಗ್ರೆಸ್‌‍ ಮೈತ್ರಿ ಮುರಿದುಕೊಂಡು ಡಿಎಂಕೆ ಬೆನ್ನಿಗೆ ಚೂರಿ ಇರಿದಿದೆ. ಶತಮಾನಗಳ ಇತಿಹಾಸವಿರುವ ಆ ಪಕ್ಷಕ್ಕೆ ಮತ್ತೊಂದು ಪಕ್ಷದ ಅಗತ್ಯವಿದೆ. ಹೀಗಾಗಿ ಯಾರೊಬ್ಬರೂ ನಂಬಬೇಡಿ ಎಂದು ಕಿವಿಮಾತು ಹೇಳಿದರು.

ಛತ್ತೀಸ್‌‍ಗಢ, ರಾಜಸ್ಥಾನದಲ್ಲೂ ಅದೇ ಆಯಿತು. ಕರ್ನಾಟಕದಲ್ಲಿ ಅದೇ ಆಟ ನಡೆಯುತ್ತದೆ. ಈಗ ಕೇರಳದ ಸರದಿ. ಹಿಮಾಚಲಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳಿಗೆ ವೇತನ ಕೊಡಲಾಗುತ್ತಿಲ್ಲ, ತೆಲಂಗಾಣದಲ್ಲಿ ರೈತರ ಆತಹತ್ಯೆ ಹೆಚ್ಚಾಗಿದೆ. ಕೇರಳದಲ್ಲಿ ಬಹುಮತದೊಂದಿಗೆ ಚುನಾವಣೆ ಗೆದ್ದರೂ ಇನ್ನೂ ಸಿಎಂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ರಾಜಸ್ಥಾನದಲ್ಲಿ ಏನಾಯಿತು ಎಂಬುದು ನಿಮಗೆ ಗೊತ್ತಿದೆ.

ಕರ್ನಾಟಕದಲ್ಲೂ ಅದೇ ಮುಂದುವರೆಯುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಕರ್ನಾಟಕದಲ್ಲಿ ಬಿಜೆಪಿ ಒಂದು ಸಣ್ಣ ಪಕ್ಷವಾಗಿ ಇಂದು ಆಡಳಿತ ನಡೆಸುವ ಹಂತಕ್ಕೆ ಬಂದಿದೆ. ಕರ್ನಾಟಕ ನಮಗೆ ಅಪಾರ ಶಕ್ತಿ ನೀಡಿತ್ತು ಎಂಬುದನ್ನು ಮರೆಯುವುದಿಲ್ಲ. ಇಂದು ಬೆಂಗಳೂರಿನ ನೆಲದಿಂದ ಕೇಸರಿ ಬಣ್ಣದ ಸೂರ್ಯ ಉದಯಿಸಿರುವುದನ್ನು ನಾನು ಕಾಣುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಭಾಷಣದುದ್ದಕ್ಕೂ ಪಶ್ಚಿಮ ಬಂಗಾಳದ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಕೊನೆಗೆ 3 ಸ್ಥಾನ ದೊರೆಯಿತು. ಮತ್ತೆ ಚುನಾವಣೆಯಲ್ಲಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದೇ ರಾಜ್ಯದಲ್ಲಿ ಈಗ 200ಕ್ಕೂ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚಿಸಿದ್ದೇವೆ. ಕೇರಳದಲ್ಲಿಯೂ ಈಗ 3 ಸ್ಥಾನ ಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಬಂಗಾಳದ ರೀತಿ ಕೇರಳದಲ್ಲಿಯೂ ಕಮಲ ಅರಳಲಿದೆ ಎಂದು ಮೋದಿ ಹೇಳಿದರು.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್‌‍ ವಿರೋಧಿಸಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ, ಕಾಂಗ್ರೆಸ್‌‍ನವರು ಮಹಿಳಾ ಮೀಸಲಾತಿಯನ್ನು ತಡೆದರು. ಇದು ಜಾರಿಯಾಗಿದ್ದರೆ ಸಾಮಾನ್ಯ ವರ್ಗದ ಮಹಿಳೆಯರು ಕೂಡ ಇಂದು ವಿಧಾನಸಭೆ ಮತ್ತು ಸಂಸತ್ತಿಗೆ ಆಯ್ಕೆಯಾಗಿರುತ್ತಿದ್ದರು. ಕರ್ನಾಟಕದ ಮಹಿಳೆಯರು ಈ ದ್ರೋಹವನ್ನು ಎಂದಿಗೂ ಕ್ಷಮಿಸಬಾರದು ಎಂದು ಕರೆ ನೀಡಿದರು.

ಕಾಂಗ್ರೆಸ್‌‍ ದೇಶದ ಅತಿ ದೊಡ್ಡ ಮಹಿಳಾ ವಿರೋಧಿ ಪಕ್ಷ. ಮಹಿಳಾ ಬಿಲ್‌ ಸಂಸತ್ತಲ್ಲಿ ಪಾಸ್‌‍ ಆಗಿದ್ದರೆ ಮಹಿಳೆಯರ ಶಕ್ತಿ ಹೆಚ್ಚುತ್ತಿತ್ತು. ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯ ಮಹಿಳಾ ಶಾಸಕರು, ಸಂಸದರು ಬರಬಹುದಿತ್ತು. ಕಾಂಗ್ರೆಸ್‌‍ನ ಈ ದ್ರೋಹವನ್ನು ದೇಶದ ಜನ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು.ಇದೇ ವೇಳೆ ಮೋದಿಯವರಿಗೆ ಪಕ್ಷದ ವತಿಯಿಂದ 13 ಕೆಜಿ ಬೆಳ್ಳಿಯ ಗಧೆಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಅಶೋಕ್‌, ಪರಿಷತ್‌ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ, ಶಾಸಕ ಅಶ್ವತ್‌್ಥ ನಾರಾಯಣ್‌, ಎಸ್‌‍.ಆರ್‌.ವಿಶ್ವನಾಥ್‌, ಮಾಜಿ ಸಿಎಂ ಬಿ.ಎಸ್‌‍.ಯಡಿಯೂರಪ್ಪ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News