Sunday, April 19, 2026
Homeರಾಜ್ಯಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಗೆ ಅಂಕಗಳ ಬದಲು ಗ್ರೇಡ್‌ ನೀಡುವ ಕುರಿತು ಕರಡು ಅಧಿಸೂಚನೆ ಪ್ರಕಟ

ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಗೆ ಅಂಕಗಳ ಬದಲು ಗ್ರೇಡ್‌ ನೀಡುವ ಕುರಿತು ಕರಡು ಅಧಿಸೂಚನೆ ಪ್ರಕಟ

Draft notification issued on giving grades instead of marks for SSLC third language

ಬೆಂಗಳೂರು,ಏ.13- ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮುಖ್ಯವಾಗಿ ಹಿಂದಿ ವಿಷಯಕ್ಕೆ ಅಂಕಗಳ ಬದಲು ಗ್ರೇಡ್‌ ನೀಡುವ ನಿರ್ಧಾರ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದೆ.

ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಏಳು ದಿನಗಳೊಳಗೆ ಆಹ್ವಾನಿಸಲಾಗಿದೆ. ಈಗಾಗಲೇ ಎಸ್‌‍ಎಸ್‌‍ಎಲ್‌ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭವಾಗಿದ್ದು, ಫಲಿತಾಂಶವನ್ನು ಏ.24 ರಂದು ಪ್ರಕಟಿಸುವ ಸಾಧ್ಯತೆ ಇದೆ.

ಕರಡು ಅಧಿಸೂಚನೆಯ ಪ್ರಕಾರ, ತೃತೀಯ ಭಾಷೆ ಹಾಗೂ ಎನ್‌ಎಸ್‌‍ಕ್ಯೂಎಫ್‌ (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು) ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಎ, ಬಿ ಮತ್ತು ಸಿ ಗ್ರೇಡ್‌ಗಳನ್ನು ನೀಡಲಾಗುತ್ತದೆ.

ಈ ಗ್ರೇಡ್‌ಗಳು ವಿದ್ಯಾರ್ಥಿಗಳ ಪಾಸ್‌‍ ಅಥವಾ ಫೇಲ್‌ ಬಗ್ಗೆ ಯಾವುದೇ ಸೂಚನೆ ನೀಡುವುದಿಲ್ಲ. ಅಂದರೆ, ಎ ಗ್ರೇಡ್‌ ಪಡೆದ ವಿದ್ಯಾರ್ಥಿಯೂ ಫೇಲ್‌ ಆಗುವುದಿಲ್ಲ. ಇದು ಕೇವಲ ಕಾರ್ಯಕ್ಷಮತೆಯ ಹಂತವನ್ನು ಸೂಚಿಸುತ್ತದೆ.

ಒಟ್ಟು ಅಂಕಗಳಲ್ಲಿ ಬದಲಾವಣೆ :
ಈ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್‌ ನೀಡುವುದರಿಂದ ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಪರಿಗಣಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಅಂದರೆ, ಹಿಂದಿ ವಿಷಯದ 100 ಅಂಕಗಳನ್ನು ಒಟ್ಟು ಮೆರಿಟ್‌ನಿಂದ ಹೊರಗಿಡಲಾಗುತ್ತದೆ.

ಹೈಕೋರ್ಟ್‌ನ ತೀರ್ಪು: ಪಿಐಎಲ್‌ ವಜಾ, 1 ಲಕ್ಷ ದಂಡ :
ಈ ಗ್ರೇಡ್‌ ನಿರ್ಧಾರ ಪ್ರಶ್ನಿಸಿ ಹೆಚ್‌.ಎನ್‌.ಚಂದನಾ ಮತ್ತು ಎಸ್‌‍.ವೆಂಕಟೇಶ್‌ ಎಂಬವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ಪರೀಕ್ಷೆಯ ಕೊನೆಯ ಹಂತದಲ್ಲಿ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಆರೋಪಿಸಿದ್ದರು.

ಆದರೆ ಅರ್ಜಿದಾರರು ಸರ್ಕಾರದ ಆದೇಶದ ನಕಲು ಅಥವಾ ಅಧಿಕೃತ ದಾಖಲೆ ಒದಗಿಸದೆ, ಕೇವಲ ಪತ್ರಿಕೆಗಳ ವರದಿ ಆಧರಿಸಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಈ ನಿಲುವನ್ನು ತೀವ್ರವಾಗಿ ಖಂಡಿಸಿ, ಅರ್ಜಿಯನ್ನು ವಜಾಗೊಳಿಸಿತು ಮತ್ತು ಅರ್ಜಿದಾರರಿಗೆ 1,00,000 (ಒಂದು ಲಕ್ಷ) ರೂಪಾಯಿ ದಂಡ ವಿಧಿಸಿತು. ದಂಡವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಸೂಚಿಸಲಾಯಿತು.

ಕರಡು ಅಧಿಸೂಚನೆ ಕುರಿತು ಯಾರಾದರೂ ಆಕ್ಷೇಪಣೆ ಅಥವಾ ಸಲಹೆ ಹೊಂದಿದ್ದಲ್ಲಿ, ಏಳು ದಿನಗಳೊಳಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬಹುದು. ಅಂತಿಮ ನಿರ್ಧಾರವನ್ನು ಸಾರ್ವಜನಿಕರ ಪ್ರತಿಕ್ರಿಯೆ ನಂತರ ಕೈಗೊಳ್ಳಲಾಗುವುದು.

ಈ ನಿರ್ಧಾರದ ಬೆಂಬಲಿಗರು ಹಿಂದಿ ತೃತೀಯ ಭಾಷೆಯಾಗಿರುವುದರಿಂದ ಅದಕ್ಕೆ ಹೆಚ್ಚಿನ ಒತ್ತಡ ಬೇಡ, ಗ್ರೇಡ್‌ ಪದ್ಧತಿಯಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ. ವಿರೋಧಿಗಳು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಹಿಂದಿ ಪ್ರಾವೀಣ್ಯ ಅಗತ್ಯ. ಗ್ರೇಡ್‌ಗಳಿಂದ ಸ್ಪರ್ಧಾತಕ ಅಂಕ ಸಿಗದು ಎಂದು ಆಕ್ಷೇಪಿಸುತ್ತಿದ್ದಾರೆ.
ಅಂಕಗಳ ವ್ಯಾಪ್ತಿ ಗ್ರೇಡ್‌
80- 100 ಎ
50- 79 ಬಿ
49 ಮತ್ತು ಅದಕ್ಕಿಂತ ಕಡಿಮೆ ಸಿ

RELATED ARTICLES

Latest News