Thursday, May 14, 2026
Homeಬೆಂಗಳೂರು2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ : ಕೇರಳದ ಮೂವರು ಸೇರಿ 5 ಮಂದಿ...

2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ : ಕೇರಳದ ಮೂವರು ಸೇರಿ 5 ಮಂದಿ ಅರೆಸ್ಟ್

Hydro ganja worth Rs 2.56 crore seized: 5 people arrested

ಬೆಂಗಳೂರು,ಮೇ 12- ನಗರದ ಮಲ್ಲೇಶ್ವರಂ ಹಾಗೂ ಅಶೋಕನಗರ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದ ಮೂವರು ಸೇರಿದಂತೆ 5 ಮಂದಿಯನ್ನು ಬಂಧಿಸಿ 2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಶೋಕನಗರ ಠಾಣೆ ಪೊಲೀಸರು ಕೇರಳದ ಅಮ್ಜದ ಮೊಹಮದ್‌ (38), ಮೊಹಮದ್‌ ಯಾಸೀರ್‌ (37) ಹಾಗೂ ಮಲ್ಲೇಶ್ವರಂ ಠಾಣೆ ಪೊಲೀಸರು ಸ್ಥಳೀಯ ನಿವಾಸಿಗಳಾದ ಅಫ್ರಾನ್‌ (26), ಸಜೀತ್‌ (21) ಹಾಗೂ ಕೇರಳದ ಸೀನಾ (28) ನನ್ನು ಬಂಧಿಸಿದ್ದಾರೆ.

ಬಂಧಿತ 5 ಮಂದಿ ಡ್ರಗ್‌ ಪೆಡ್ಲರ್‌ಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಹೊರರಾಜ್ಯದ ಹಾಗೂ ಸ್ಥಳೀಯ ಅಪರಿಚಿತ ವ್ಯಕ್ತಿಗಳಿಂದ ಹೈಡ್ರೋ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ಹೇಳಿದ್ದಾರೆ.

ಅಶೋಕನಗರ ಠಾಣೆ ಪೊಲೀಸರು 1.12 ಕೋಟಿ (ಮಾರುಕಟ್ಟೆ ಮೌಲ್ಯ 2.24 ಕೋಟಿ)ಮೌಲ್ಯದ 3 ಕೆಜಿ 222 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡು ಕೇರಳದ ಇಬ್ಬರನ್ನು ಬಂಧಿಸಿದರೆ, ಮಲ್ಲೇಶ್ವರಂ ಠಾಣೆ ಪೊಲೀಸರು ಮೂವರನ್ನು ಬಂಧಿಸಿ 16.24 ಲಕ್ಷ (ಮಾರುಕಟ್ಟೆ ಮೌಲ್ಯ 32.48 ಲಕ್ಷ ) ಮೌಲ್ಯದ 464 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ಗಳಾದ ರವಿ ಹಾಗೂ ಯಶವಂತಕುಮಾರ್‌ ಮತ್ತು ಸಿಬ್ಬಂದಿ ತಂಡ ಕೈಗೊಂಡು ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಈ ಪ್ರಕರಣದಲ್ಲಿ ಆರೋಪಿಗಳಿಗೆ ಹೈಡ್ರೋ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ.

ಮನೆ ಹಿಂಬಾಗಿಲು ಚಿಲಕ ಒಡೆದು ಕಳ್ಳತನ : 50 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ವಶ

ಬೆಂಗಳೂರು,ಮೇ 12- ಮನೆಯ ಹಿಂಬಾಗಿಲಿನ ಚಿಲಕ ಒಡೆದು ಒಳ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ಮೌಲ್ಯದ ವಜ್ರಾಭರಣ ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ನಿವಾಸಿ ಮಹೇಶ್‌ಗೌಡ ಬಂಧಿತ ಆರೋಪಿ. ಈತ ಕೋಣನಕುಂಟೆಯ ಹರಿಹರ ನಗರದಲ್ಲಿ ವಾಸವಾಗಿದ್ದ.

ಚುಂಚಘಟ್ಟ ಮುಖ್ಯ ರಸ್ತೆಯ ಮೈಸೂರು ಬ್ಯಾಂಕ್‌ ಕಾಲೋನಿಯಲ್ಲಿ ವಾಸವಿರುವ ರೇಖಾ ಎಂಬುವವರು ಕುಟುಂಬ ಸಮೇತ ಊರಿಗೆ ಹೋಗಿದ್ದಾಗ ಕಳ್ಳರು ಅವರ ಮನೆಯ ಹಿಂಬಾಗಿಲಿನ ಚಿಲಕವನ್ನು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನ, ವಜ್ರಾಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದರು.

ರೇಖಾ ಅವರ ಸಂಬಂಧಿ ಅವರ ಮನೆ ಬಳಿ ಹೋದಾಗ ಬಾಗಿಲು ತೆರೆದಿರುವುದು ಕಂಡು ಬಂದಿದೆ. ತಕ್ಷಣ ಅವರು ರೇಖಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ರೇಖಾ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಾಹಿತಿಗಳನ್ನು ಕಲೆ ಹಾಕಿ ಮದ್ದೂರು ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ ಆಭರಣಗಳ ಪೈಕಿ ಕೆಲವನ್ನು ಮದ್ದೂರಿನ ಜ್ಯೂವೆಲರಿ ಅಂಗಡಿಗಳಲ್ಲಿ ಅಡವಿಟ್ಟಿರುವುದಾಗಿ ಹೇಳಿದ್ದಾನೆ.

ಇನ್ನೂ ಕೆಲವು ಆಭರಣಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಈತನ ಮಾಹಿತಿಯಂತೆ ಜ್ಯೂವೆಲರಿ ಅಂಗಡಿಗಳಿಂದ ಒಟ್ಟು 50 ಲಕ್ಷ ಮೌಲ್ಯದ 318 ಗ್ರಾಂ ಚಿನ್ನ, ವಜ್ರಾಭರಣಗಳು, 2 ಕೆಜಿ 435 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿ ಬಂಧನದಿಂದ ಕೋಣನಕುಂಟೆ ಪೊಲೀಸ್‌‍ ಠಾಣೆಯ 5 ಮನೆಗಳವು ಪ್ರಕರಣಗಳು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

40 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ :

ಬೆಂಗಳೂರು, ಮೇ 12- ಮನೆಗಳ್ಳತನ ಮಾಡುತ್ತಿದ್ದ ಹೊರರಾಜ್ಯದ ಮೂವರನ್ನು ಕೆಆರ್‌ಪುರ ಠಾಣೆ ಪೊಲೀಸರು ಬಂಧಿಸಿ ನಗದು ಸೇರಿದಂತೆ 40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಗೋಪಾಲ್‌ (29), ಕೈಲಾಶ್‌ (30) ಮತ್ತು ಉತ್ತರ ಪ್ರದೇಶದ ನಾಗೇಂದ್ರ ಸಹನಿ (36) ಬಂಧಿತ ಆರೋಪಿಗಳು.

ಆನಂದಪುರದ ನಿವಾಸಿ ಚೌದರಿ ಅವರ ಪತ್ನಿ, ಮಕ್ಕಳನ್ನು ಕರೆದುಕೊಂಡು ಟಿಸಿಪಾಳ್ಯದ ಅಂಗಡಿಗೆ ಹೋಗಿದ್ದು, ಮಧ್ಯಾಹ್ನದ ವೇಳೆಗೆ ವಾಪಸ್‌‍ ಬರುವಷ್ಟರಲ್ಲಿ ಅವರ ಮನೆಯ ಬೀಗ ಒಡೆದು ಕಳ್ಳರು ಒಳನುಗ್ಗಿ ಹಣ, ಆಭರಣ ದೋಚಿ ಪರಾರಿಯಾಗಿದ್ದರು.ಮನೆಯ ಕೊಠಡಿಯ ಬೀರುವಿನಲ್ಲಿದ್ದ 4.90 ಲಕ್ಷ ನಗದು,ಚಿನ್ನಾಭರಣ, ಬೆಳ್ಳಿವಸ್ತುಗಳು ಕಳ್ಳತನವಾಗಿರುವ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಖಚಿತ ಮಾಹಿತಿ ಮೇರೆಗೆ ಹೊರರಾಜ್ಯದ ರಾಜಸ್ಥಾನಕ್ಕೆ ಹೋಗಿ ಅಲ್ಲಿನ ಜಾನೋರ್‌ ತಾಲ್ಲೂಕಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇನ್ನಿಬ್ಬರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಆ ಇಬ್ಬರು ಆರೋಪಿಗಳನ್ನು ಟ್ರಾನ್ಸಿಸ್ಟ್‌ ವಾರೆಂಟ್‌ ಮೂಲಕ ನಗರಕ್ಕೆ ಕರೆತಂದು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ ಚಿನ್ನಾಭರಣಗಳನ್ನು ಬೆಳ್ಳಂದೂರಿನ ದೊಡ್ಡಕನ್ನಹಳ್ಳಿಯಲ್ಲಿರುವ ಸಹಚರನ ಬಟ್ಟೆ ಅಂಗಡಿಯಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳ ಮಾಹಿತಿ :
ಮೇರೆಗೆ ಉತ್ತರ ಪ್ರದೇಶದ ಮಾವು ಜಿಲ್ಲೆಯಲ್ಲಿ ಸಹಚರನನ್ನು ವಶಕ್ಕೆ ಪಡೆದು ಆತನನ್ನೂ ಸಹ ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿ ಬಟ್ಟೆ ಅಂಗಡಿಯಿಂದ ಹಾಗೂ ಮಾರಾಟ ಮಾಡಿದ್ದ ವ್ಯಕ್ತಿಯಿಂದ ಒಟ್ಟು 22 ಸಾವಿರ ನಗದು ಸೇರಿದಂತೆ 40 ಲಕ್ಷ ಮೌಲ್ಯದ 196 ಗ್ರಾಂ ಚಿನ್ನಾಭರಣ, 1ಕೆಜಿ 756 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ರಾಮಮೂರ್ತಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

10 ಲಕ್ಷ ಮೌಲ್ಯದ ಜಿಂಕೆ ಕೊಂಬು ಜಪ್ತಿ :

ಬೆಂಗಳೂರು,ಮೇ 12- ಸಿಸಿಬಿ ಹಾಗೂ ಚಿಕ್ಕಬಾಣಾವರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ 10 ಲಕ್ಷ ಮೌಲ್ಯದ 1 ಜಿಂಕೆ ಕೊಂಬನ್ನು ವಶಪಡಿಸಿಕೊಂಡಿದ್ದಾರೆ.

ಮೂಡಲಪಾಳ್ಯದ, ತಮಿಳುನಾಡು ಮೂಲದ ಕೃಷ್ಣಗಿರಿ ಜಿಲ್ಲೆಯ ಮುರುಳಿ (29), ಮಾರೇನಹಳ್ಳಿಯ ಮಂಜುನಾಥ (39), ಚಿಕ್ಕಸಂದ್ರದ ಕಾರ್ಯಪ್ಪ (53) ಬಂಧಿತ ಆರೋಪಿಗಳು.ಚಿಕ್ಕಬಾಣಾವರದ ಕಾಲೇಜೊಂದರ ಸಮೀಪ ಕಾಡು ಪ್ರಾಣಿಯ ಕೊಂಬನ್ನು ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ) ದ ಅಧಿಕಾರಿಗಳು ಹಾಗೂ ಚಿಕ್ಕಬಾಣಾವರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ಸ್ಥಳದ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿ, ಜಿಂಕೆ ಕೊಂಬನ್ನು ವಶಕ್ಕೆ ಪಡೆಯಲಾಗಿದೆ.

ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ವೆಸಗಿರುವುದಾಗಿ ಹೇಳಿದ್ದಾರೆ.ತಮಿಳುನಾಡಿನ ಕೃಷ್ಣಗಿರಿಯ ವ್ಯಕ್ತಿಯೊಬ್ಬ ಈ ಜಿಂಕೆ ಕೊಂಬು ತಂದು ಕೊಟ್ಟಿದ್ದಾಗಿ ಆರೋಪಿಗಳು ಹೇಳಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಶೋಧ ಮುಂದುವರೆದಿದ್ದು, ಆತ ಸಿಕ್ಕ ನಂತರ ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ. ಮೂವರ ಪೈಕಿ ಒಬ್ಬನನ್ನು ಪೊಲೀಸ್‌‍ ವಶಕ್ಕೆ ಪಡೆದುಕೊಂಡಿದ್ದು, ಉಳಿದ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸಿಸಿಬಿ ಇನ್‌್ಸಪೆಕ್ಟರ್‌ ಸುರೇಶ್‌ ಮತ್ತು ಚಿಕ್ಕಬಾಣಾವರ ಠಾಣೆ ಎಎಸ್‌‍ಐ ಸಾಗರ್‌ ಹಾಗೂ ಸಿಬ್ಬಂದಿ ತಂಡ ಈ ಕಾರ್ಯಚರಣೆ ಕೈಗೊಂಡಿದ್ದು, ತನಿಖೆ ಮುಂದುವರೆದಿದೆ.

RELATED ARTICLES

Latest News