Homeರಾಜ್ಯಬಿಡದಿ ಉಪನಗರ ಯೋಜನೆ ಭೂಸ್ವಾಧೀನಕ್ಕೆ ಯಾವ ಆಧಾರದ ಮೇಲೆ ಪರಿಹಾರ ನಿಗದಿ ಮಾಡಿದ್ದೀರಿ..? : ಹೆಚ್ಡಿಕೆ...

ಬಿಡದಿ ಉಪನಗರ ಯೋಜನೆ ಭೂಸ್ವಾಧೀನಕ್ಕೆ ಯಾವ ಆಧಾರದ ಮೇಲೆ ಪರಿಹಾರ ನಿಗದಿ ಮಾಡಿದ್ದೀರಿ..? : ಹೆಚ್ಡಿಕೆ ಪ್ರಶ್ನೆ

HD Kumaraswamy

ಬೆಂಗಳೂರು,ಮೇ 14- ರೈತರ ವಿರುದ್ಧವಾಗಿ ಬಿಡದಿ ಉಪನಗರ ಯೋಜನೆಗೆ ಪ್ರತಿ ಎಕರೆಗೆ 2 ಕೋಟಿ ರೂ.ನಂತೆ ಭೂಸ್ವಾಧೀನ ಪಡಿಸಿಕೊಳ್ಳಲು ಯಾವ ಆಧಾರದ ಮೇಲೆ ಪರಿಹಾರ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲ್‌ಟನ್‌ ರೆಸಾರ್ಟ್ ಒಳಗಿದ್ದ ಸರ್ಕಾರಿ ಖರಾಬು ಭೂಮಿಗೆ ಪ್ರತಿ ಎಕರೆಗೆ 12 ಕೋಟಿ ರೂ.ನಂತೆ ಸರ್ಕಾರ ನಿಗಧಿ ಮಾಡಿತ್ತು. ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳ ರೈತರ ಜಮೀನುಗಳಿಗೆ ಎಕರೆಗೆ 2 ಕೋಟಿ ರೂ.ನಂತೆ ನಿಗಧಿ ಮಾಡಲಾಗಿದೆ ಎಂದು ಪ್ರಶ್ನಿಸಿದರು.

ಎಂಟು ಗ್ರಾಮಗಳ ತೆಂಗು, ರೇಷೆ, ತರಕಾರಿ ಬೆಳೆಯುವ ನೀರಾವರಿ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಲಾಗುತ್ತಿದೆ. ಒಂದು ವರ್ಷದ ಯೋಜನೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಪ್ರವೇಶ ಮಾಡಲು ರೈತರಿಗೆ ಅವಕಾಶ ಮಾಡಿಕೊಡಲಿಲ್ಲ. ಆದರೂ ಶೇ.80ರಷ್ಟು ರೈತರು ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆಂದು ಹೇಳುತ್ತಿದ್ದಾರೆ? ಒಪ್ಪಿಗೆ ಕೊಟ್ಟಿರುವ ರೈತರು ಯಾರು? ಎಂದು ತರಾಟೆಗೆ ತೆಗೆದುಕೊಂಡರು.

ಕಾನೂನು ಚೌಕಟ್ಟಿನಲ್ಲಿ ರೈತರ ಭೂಮಿ ಉಳಿಸಲು ಹಾಗೂ ರೈತರಿಗೆ ರಕ್ಷಣೆ ಕೊಡಲು ಜೆಡಿಎಸ್‌‍ ಪಕ್ಷ ಸಿದ್ದವಿದೆ. ಖಾಸಗಿಯವರೇ ಒಂದು ಎಕರೆಯನ್ನು 4ರಿಂದ 4.50 ಕೋಟಿ ರೂ.ನಂತೆ ಖರೀದಿಸುತ್ತಿದ್ದಾರೆ.ಟೌನ್‌ಶಿಪ್‌ ವಿಚಾರದಲ್ಲಿ ರೈತರ ವಿರುದ್ದ ತೀರ್ಮಾನ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.

ನ್ಯಾಯಾಂಗ ತನಿಖೆ:
ಯಾವ ಯಾವ ಜಿಲ್ಲೆಯಲ್ಲಿ ಯಾವ ಯಾವ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂಬುದನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.

ಕೆ ಐಎಡಿಬಿ ಇರಬಹುದು, ಟೌನ್‌ಶಿಪ್‌ ಇರಬಹುದು. ಎಲ್ಲಾ ಭೂಸ್ವಾಧೀನ ಜಮೀನುಗಳ ಬಗ್ಗೆ ತನಿಖೆಯಾಗಲಿ ಎಂದರು.ಬಿಡದಿಯ 8 ಗ್ರಾಮಗಳಲ್ಲಿ 2230 ಎಕರೆ ಇದ್ದ ಭೂಮಿ 750 ಎಕರೆಗೆ ಇಳಿದಿದೆ. ಉಳಿದ ಭೂಮಿ ಯಾವ ಅಧಿಕಾರಿಗಳಿಗೆ, ಯಾವ ರಾಜಕಾರಣಿಗಳಿಗೆ ಎಷ್ಟೆಷ್ಟು ಪಾಲು ಹೋಗಿದೆ ಎಂದು ಪ್ರಶ್ನಿಸಿದರು.

ರೈತರನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಬಿಡಲಿಲ್ಲ. ಆದರೂ ರೈತರು ಭೂಸ್ವಾಧೀನಕ್ಕೆ ಒಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಕುರ್ಚಿ ಉಳಿದರೆ ಸಾಕು ಯಾರಾದರೂ ದರೋಡೆ ಮಾಡಿಕೊಳ್ಳಲಿ ಎಂಬ ಮನೋಭಾವವಿದೆ. ಇದು ರಿಯಲ್‌ ಎಸ್ಟೇಟ್‌ಗೋ, ಅಭಿವೃದ್ಧಿಗೋ ಮಾಡುತ್ತಿರುವ ಯೋಜನೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು.

ಸರ್ಕಾರ 12 ಸಾವಿರ ಕೋಟಿ ರೂ. ಸಾಲ ಪಡೆಯುತ್ತಿದೆ. ರೈತರಿಗೆ ಧಮ್ಕಿ ಹಾಕಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು. ಬಿಡದಿ ಟೌನ್‌ಶಿಪ್‌ನಿಂದ ಸಾರ್ವಜನಿಕ ಹಿತಾಸಕ್ತಿ, ರೈತರ ಹಿತಾಸಕ್ತಿ ಇದೆಯೇ? ಸರ್ಕಾರದಿಂದ ಅಧಿಕೃತ ರಿಯಲ್‌ ಎಸ್ಟೇಟ್‌ ಮಾಡಲು ಹೊರಟಿದ್ದಾರೆ. ಸರ್ಕಾರ ರಿಯಲ್‌ ಎಸ್ಟೇಟ್‌ ಮಾಡಲು ಅವಕಾಶವಿಲ್ಲ.

ಟೌನ್‌ಶಿಪ್‌ ಯೋಜನೆಯಿಂದ 33 ಸಾವಿರ ಕೋಟಿ ರೂ. ಲಾಭ ಗಳಿಸುವ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದರು. ನೈಸ್‌‍ಗೆ ಭೂ ಸ್ವಾಧೀನವಾಗಿರುವ ಜಮೀನನ್ನು ರೈತರಿಗೆ ಹಿಂದಿರುಗಿಸಬೇಕು ಎಂದಿದ್ದರೂ ಏಕೆ ಸರ್ಕಾರ ಮಾಡುತ್ತಿಲ್ಲ. ಈಗಿನ ಮುಖ್ಯಮಂತ್ರಿಯೇ ಬಿಎಂಐಸಿಪಿ ಅಧ್ಯಕ್ಷರಾಗಿದ್ದರು. ದಯೆ ದಾಕ್ಷಿಣ್ಯಕ್ಕೆ ಒಳಗಾಗಿ ರಿಯಲ್‌ ಎಸ್ಟೇಟ್‌ ಏಜೆಂಟರಾಗಬೇಡಿ. ಒಳ್ಳೆಯ ಹೆಸರನ್ನು ತೆಗೆದುಕೊಂಡು ಹೋಗಿ ಎಂದು ಸಿದ್ದರಾಮಯ್ಯನವರ ಕುರಿತು ಹೇಳಿದರು.

ಜಿಬಿಎ ವ್ಯಾಪ್ತಿಯಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ ಮಾಡಲು ರಿಯಾಯ್ತಿ ಘೋಷಿಸಿದ್ದಾರೆ. 5 ನಗರ ಪಾಲಿಕೆಗಳಲ್ಲಿ ಎಷ್ಟು ಹಣವಿದೆ ಎಂಬುದಕ್ಕೆ ಶ್ವೇತಪತ್ರ ಹೊರಡಿಸಲಿ. ಆತುರ ಪಡಬಾರದು. ಒಳ್ಳೆಯ ಸರ್ಕಾರ ಬರುವುದು ದೂರವಿಲ್ಲ. ಆಗ ಎಲ್ಲವೂ ಒಳ್ಳೆಯದಾಗಲಿದೆ ಎಂದು ಅವರು ಭರವಸೆ ನೀಡಿದರು.

ಜಿಬಿಎಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ದ ಇರುವುದಾಗಿ ಹೇಳಿದ ಮೇಲೆ ಅದನ್ನು ತಡೆಯಲು ಯಾರು ದಬ್ಬಾಳಿಕೆ ಮಾಡಿ ನಿಲ್ಲಿಸಿದರು? ಎಂದು ಪ್ರಶ್ನಿಸಿದರು.
ಕಳೆದ ಮೂರು ವರ್ಷಗಳಿಂದ ಸುಮನಿದ್ದ ರಾಜ್ಯ ಸರ್ಕಾರ ಒಂದು ಸಮುದಾಯವನ್ನು ಓಲೈಸಲು ಹಿಜಾಬ್‌ ನಿಷೇಧವನ್ನು ವಾಪಸ್‌‍ ತೆಗೆದುಕೊಂಡಿದೆ. ಉಪಚುನಾವಣೆ ಫಲಿತಾಂಶದ ನಂತರ ಈ ತೀರ್ಮಾನ ಮಾಡಲಾಗಿದೆ. ಮೇ 16ರಂದು ಆ ಸಮುದಾಯ ಸಮಾವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಜೆಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಟೀಶರ್ಟ್‌ಗಳನ್ನು ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಕರೆಮ.ಜಿ. ನಾಯಕ್‌, ಜವರಾಯಿ ಗೌಡ, ಮಾಜಿ ಶಾಸಕರಾದ ವೆಂಕಟರಾವ್‌ ನಾಡಗೌಡ, ಎ.ಮಂಜು, ತಿಪ್ಪೇಸ್ವಾಮಿ, ರಮೇಶ್‌ ಗೌಡ, ಜೆಡಿಎಸ್‌‍ ಕಾನೂನು ಘಟಕದ ರಾಜ್ಯಾಧ್ಯಕ್ಷ ರಂಗನಾಥ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News