Thursday, April 16, 2026
Homeರಾಜಕೀಯದೆಹಲಿಯಲ್ಲಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಸಚಿವಾಕಾಂಕ್ಷಿಗಳು

ದೆಹಲಿಯಲ್ಲಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಸಚಿವಾಕಾಂಕ್ಷಿಗಳು

Ministerial aspirants meet Surjewala in Delhi

ಬೆಂಗಳೂರು,ಏ.16- ಸಚಿವ ಸಂಪುಟ ಪುನರ್‌ ರಚನೆ ಸಲುವಾಗಿ ಹೈಕಮಾಂಡ್‌ನಲ್ಲಿ ಒತ್ತಡ ಹೇರಲು ದೆಹಲಿಯಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್‌‍ನ ಹಿರಿಯ ಶಾಸಕರ ನಿಯೋಗ ಇಂದು ಕರ್ನಾಟಕ ಕಾಂಗ್ರೆಸ್‌‍ ಉಸ್ತುವಾರಿನಾಯಕ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದಾರೆ.

ಮಧ್ಯಾಹ್ನದ ವೇಳೆ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಶಾಸಕರಾದ ಟಿ.ಬಿ.ಜಯಚಂದ್ರ, ಪಿ.ಎಂ.ಅಶೋಕ್‌ ಪಟ್ಟಣ್‌, ಕೆ.ಷಡಕ್ಷರಿ, ಜಿ.ಟಿ.ಪಾಟೀಲ್‌, ಬಿ.ಜಿ.ಶಾಂತನಗೌಡ, ಪುಟ್ಟರಂಗಶೆಟ್ಟಿ, ಹಂಪನಗೌಡ ಬಾದರ್ಲಿ, ಬಿ.ಶಿವಣ್ಣ, ಮಹಂತೇಶ್‌ ಕೌಜಲಗಿ, ಯಶವಂತರಾಯ ಪಾಟೀಲ್‌, ಪಿ.ಎಸ್‌‍.ನಾಡಗೌಡ ಸೇರಿದಂತೆ ಹಲವರು ಇಂದು ಬೆಳಗ್ಗೆ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಚಿವ ಸಂಪುಟ ಪುನರ್‌ ರಚನೆಯಾಗಬೇಕು. ತಮಗೆ ಅವಕಾಶ ನೀಡಬೇಕು ಎಂಬುದು ಈ ಶಾಸಕರ ಬೇಡಿಕೆಯಾಗಿದೆ. ಅದೇ ಸಮಯದಲ್ಲಿ ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯಲ್ಲಿನ ಗೊಂದಲಗಳನ್ನು ಬಗೆಹರಿಸುವಂತೆ ಹಿರಿಯ ಶಾಸಕರು ಮನವಿ ಮಾಡಿದ್ದಾರೆ.

ಕಳೆದ ಭಾನುವಾರದಿಂದಲೂ ದೆಹಲಿಯಲ್ಲೇ ಬೀಡುಬಿಟ್ಟಿರುವ ಶಾಸಕರು ಸೋಮವಾರ ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಅನಂತರ ರಾಹುಲ್‌ಗಾಂಧಿ ಸೇರಿದಂತೆ ಬೇರೆ ಯಾವ ನಾಯಕರೂ 5 ದಿನಗಳಾದರೂ ಲಭ್ಯವಾಗಿರಲಿಲ್ಲ. ಶಾಸಕರ ಒತ್ತಡಕ್ಕೆ ಮಣಿದು ಇಂದು ಬೆಳಗ್ಗೆ ರಣದೀಪ್‌ ಸಿಂಗ್‌ ಸುರ್ಜೇವಾಲ ಭೇಟಿಗೆ ಸಮಯ ನೀಡಿತ್ತು. ಕೆ.ಸಿ. ವೇಣುಗೋಪಾಲ್‌ ಕೇರಳದಿಂದ ದೆಹಲಿಗೆ ಮರಳಿದ್ದರೂ ಕೂಡ ಹಿರಿಯ ಶಾಸಕರ ನಿಯೋಗಕ್ಕೆ ಸಮಯ ನೀಡಲು ಹಿಂದೇಟು ಹಾಕಿದ್ದರು.

ಸಚಿವ ಸಂಪುಟ ಪುನರ್‌ ರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ಅದಕ್ಕಾಗಿ ಶಾಸಕರು ದೆಹಲಿಗೆ ಭೇಟಿ ನೀಡುವ ಅಗತ್ಯ ಇಲ್ಲ. ಹೀಗಾಗಿ ಎಲ್ಲರೂ ವಾಪಸ್‌‍ ಹೋಗಿ ಎಂದು ವರಿಷ್ಠರು ಸಂದೇಶ ರವಾನಿಸಿದ್ದಾರೆ. ಸಂಸತ್‌ನಲ್ಲಿ ಮಹಿಳಾ ಮೀಸಲಾತಿಯ ಮಸೂದೆ ಮಂಡನೆಯಾಗುತ್ತಿದೆ. ಅತೀ ಮುಖ್ಯವಾದ ಈ ಮಸೂದೆ ಮೇಲಿನ ಚರ್ಚೆಗೆ ಕಾಂಗ್ರೆಸ್‌‍ನಲ್ಲಿ ಹಿರಿಯ ನಾಯಕರು ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಕರ್ನಾಟಕದ ನಿಯೋಗಕ್ಕೆ ಭೇಟಿ ಮಾಡಲು ಸಮಯ ನೀಡುತ್ತಿಲ್ಲ ಎಂದು ಹೇಳಲಾಗಿದೆ.

ರಾಹುಲ್‌ಗಾಂಧಿ ಅವರಂತೂ ಕಾಂಗ್ರೆಸ್‌‍ ಶಾಸಕರನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ. ಅವರ ಆಪ್ತರಾದ ಕೆ.ಸಿ.ವೇಣುಗೋಪಾಲ್‌ ಕೂಡ ಸಮಯ ನೀಡದೆ ಸತಾಯಿಸುತ್ತಿದ್ದಾರೆ. ಕೊನೆಗೆ ಇಂದು ವೇಣುಗೋಪಾಲ್‌ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ ಬಹುತೇಕ ಶಾಸಕರು ದೆಹಲಿಯಿಂದ ಬೆಂಗಳೂರಿಗೆ ವಾಪಸ್‌‍ ಆಗಲಿದ್ದಾರೆ. ಒಂದು ವೇಳೆ ಅಗತ್ಯ ಬಿದ್ದರೆ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಲು ಮತ್ತೊಮೆ ದೆಹಲಿಗೆ ಭೇಟಿ ನೀಡಲು ಸಿದ್ಧ ಎಂದು ಶಾಸಕ ಟಿ.ಬಿ.ಜಯಚಂದ್ರ ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠ ನಾಯಕರು ಸಂಸತ್ತಿನ ಅಧಿವೇಶನದ ಹಿನ್ನೆಲೆಯಲ್ಲಿ ಕಾರ್ಯದೊತ್ತಡದಲ್ಲಿದ್ದಂತ್ತಿದೆ. ಹೀಗಾಗಿ ನಮಗೆ ಸಮಯ ನೀಡುವುದು ಕಷ್ಟವಾಗುತ್ತಿದೆ. ಈಗ ಸಾಧ್ಯವಾಗದೇ ಇದ್ದರೆ ಮತ್ತೊಂದು ದಿನ ದೆಹಲಿಗೆ ಬರಲು ತಾವು ಸಿದ್ಧ ಎಂದು ಹೇಳಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಶಾಸಕರು ಸಂಪುಟ ಪುನರ್‌ ರಚನೆಗಾಗಿ ಪಟ್ಟು ಹಿಡಿದು ಒಂದು ವಾರದಿಂದಲೂ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.ಕೆಪಿಸಿಸಿ ಅಧ್ಯಕ್ಷರ ಆಕ್ಷೇಪಣೆಗೂ ಹಿರಿಯ ಶಾಸಕರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

RELATED ARTICLES

Latest News