ನವವದೆಹಲಿ,ಏ.16- ದೇಶಾದ್ಯಂತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಮಹತ್ವದ ಎಚ್ಚರಿಕೆ ನೀಡಿದೆ. ಮಿತಿಮೀರಿದ ಭಾರ (ಓವರ್‌ಲೋಡ್) ಹೊತ್ತೊಯ್ಯುವ ವಾಹನಗಳ ಮೇಲೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚು ತೂಕದ ಸರಕು ಅಥವಾ ಪ್ರಯಾಣಿಕರನ್ನು ಸಾಗಿಸಿದರೆ, ಇನ್ನು ಮುಂದೆ ಭಾರೀ ಮೊತ್ತದ ಹೆಚ್ಚುವರಿ ದಂಡವನ್ನು ಪಾವತಿಸಲೇಬೇಕು.
ಪ್ರತಿದಿನ ಲಕ್ಷಾಂತರ ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗಳ ಸಂರಕ್ಷಣೆ, ಮೂಲಸೌಕರ್ಯ ಸುಧಾರಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ನಾಲ್ಕನೇ ತಿದ್ದುಪಡಿ) ನಿಯಮಗಳು-2026ನ್ನು ಜಾರಿಗೊಳಿಸಿದೆ. ಇದರ ಪ್ರಕಾರ, ವಾಹನವು ಹೊತ್ತೊಯ್ಯುವ ಭಾರದ ಪ್ರಮಾಣವನ್ನು ಶೇಕಡಾವಾರು ಪ್ರಕಾರ ವಿಂಗಡಿಸಿ, ದಂಡವನ್ನು ನಿಗದಿಪಡಿಸಲಾಗಿದೆ. ಈ ನಿಯಮವು ಮುಖ್ಯವಾಗಿ ವಾಣಿಜ್ಯ ವಾಹನಗಳಿಗೆ (ಟ್ರಕ್, ಲಾರಿ, ಬಸ್, ಟೆಂಪೊ ಇತ್ಯಾದಿ) ಅನ್ವಯಿಸುತ್ತದೆ.
ಒಂದು ವಾಹನದ ಸಾಮಾನ್ಯ ಟೋಲ್ ಶುಲ್ಕ 100 ಆಗಿದ್ದರೆ, ಅದು ಶೇ.40ಕ್ಕಿಂತ ಹೆಚ್ಚು ಓವರ್‌ಲೋಡ್ ಹೊತ್ತಿದ್ದರೆ, ಆ ವಾಹನವು 4 ಪಟ್ಟು ಹೆಚ್ಚುವರಿ ದಂಡವನ್ನು ಕಟ್ಟಬೇಕಾಗುತ್ತದೆ. ಈ ದಂಡವು ಸಾಮಾನ್ಯ ಟೋಲ್ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ.
ಡಿಜಿಟಲ್ ತೂಕದ ಯಂತ್ರಗಳ ಅಳವಡಿಕೆ :
ಈ ಹೊಸ ನಿಯಮಗಳನ್ನು ಜಾರಿಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶದ ಪ್ರಮುಖ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸುತ್ತಿದೆ. ಈ ಯಂತ್ರಗಳು ವಾಹನದ ತೂಕವನ್ನು ಸ್ವಯಂಚಾಲಿತವಾಗಿ ಅಳೆದು, ಓವರ್‌ಲೋಡ್ ಪ್ರಮಾಣವನ್ನು ನಿಖರವಾಗಿ ಪತ್ತೆ ಮಾಡುತ್ತವೆ.
ತೂಕ ಮಾಡುವ ಸೌಲಭ್ಯವಿಲ್ಲದ ಟೋಲ್‌ಗೇಟ್‌ಗಳಲ್ಲಿ ಯಾವುದೇ ಹೆಚ್ಚುವರಿ ದಂಡವನ್ನು ವಿಧಿಸಲಾಗುವುದಿಲ್ಲ. ಆದರೆ ಡಿಜಿಟಲ್ ತೂಕದ ಯಂತ್ರಗಳನ್ನು ಹೊಂದಿರುವ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ.
ಹೊಸ ನಿಯಮದ ಪ್ರಕಾರ, ಓವರ್ಲೋಡ್ ದಂಡವನ್ನು ಕೂಡ ಪಾವತಿಸಬೇಕಾಗುತ್ತದೆ. ನಗದು ಅಥವಾ ಇತರ ಯಾವುದೇ ವಿಧಾನದಲ್ಲಿ ಪಾವತಿ ಸ್ವೀಕರಿಸಲಾಗುವುದಿಲ್ಲ. ಇತ್ತೀಚೆಗಷ್ಟೇ ಏ.10ರಿಂದ ಸರ್ಕಾರವು ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಟೋಲ್ ಕಟ್ಟದೆ ಅಥವಾ ನಿಯಮ ಉಲ್ಲಂಘಿಸಿದರೆ ಭಾರೀ ದಂಡಕ್ಕೆ ಗುರಿಯಾಗಬೇಕಾಗುತ್ತದೆ.
ಸರ್ಕಾರದ ಹೇಳಿಕೆ ಏನು? :
ಈ ನಿಯಮಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗಳ ದೀರ್ಘವಾದ ಬಾಳಿಕೆ ಹೆಚ್ಚಿಸುವುದು, ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು ಮತ್ತು ಅಕ್ರಮ ಸರಕು ಸಾಗಣೆಗೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ. ಅತಿಯಾದ ಭಾರದಿಂದಾಗಿ ರಸ್ತೆಗಳು ಶೀಘ್ರದಲ್ಲೇ ಹಾಳಾಗುತ್ತವೆ, ಅಪಘಾತ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ವಾಹನ ಸವಾರರು ತಮ ವಾಹನಗಳಲ್ಲಿ ನಿಗದಿತ ಮಿತಿಯೊಳಗೆ ಭಾರವನ್ನೇ ಹೊತ್ತೊಯ್ಯಬೇಕು ಎಂದು ಕೇಂದ್ರ ಸಚಿವಾಲಯ ಮನವಿ ಮಾಡಿದೆ.
ವಾಣಿಜ್ಯ ವಾಹನ ಚಾಲಕರು ಮತ್ತು ಮಾಲೀಕರು ತಮ ವಾಹನದ ನೋಂದಣಿ ಪ್ರಮಾಣಪತ್ರದಲ್ಲಿ ನಮೂದಿಸಿರುವ ಗರಿಷ್ಠ ಸಾಗಣೆ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಮೀರದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ, 2 ಪಟ್ಟು ಅಥವಾ 4 ಪಟ್ಟು ಹೆಚ್ಚುವರಿ ಟೋಲ್ ದಂಡ ಭಾರಿಯಾಗಿ ಪರಿಣಮಿಸಬಹುದು.
ಶೇ. 10 ರವರೆಗೆ (ಸಣ್ಣ ಪ್ರಮಾಣದ ಓವರ್‌ಲೋಡ್): ನಿಗದಿತ ಮಿತಿಗಿಂತ ಶೇಕಡಾ 10ರಷ್ಟು ಹೆಚ್ಚುವರಿ ಭಾರವಿದ್ದರೆ, ಯಾವುದೇ ದಂಡ ಇರುವುದಿಲ್ಲ. ಇದು ಸಣ್ಣ ತಪ್ಪುಗಳಿಗೆ ಗ್ರೇಸ್ ಅವಕಾಶ.
ಶೇ. 10 ರಿಂದ ಶೇ. 40 ರವರೆಗೆ (ಮಧ್ಯಮ ಪ್ರಮಾಣದ ಓವರ್‌ಲೋಡ್): ಮಿತಿಗಿಂತ ಶೇ. 10ರಿಂದ 40ರಷ್ಟು ಭಾರ ಹೆಚ್ಚಿದ್ದರೆ, ಸಾಮಾನ್ಯ ಟೋಲ್ ಶುಲ್ಕಕ್ಕಿಂತ 2 ಪಟ್ಟು ದಂಡ ವಿಧಿಸಲಾಗುತ್ತದೆ.ಶೇ. 40 ಕ್ಕಿಂತ ಹೆಚ್ಚು (ಅತಿ ಪ್ರಮಾಣದ ಓವರ್‌ಲೋಡ್): ಒಂದು ವೇಳೆ ಹೆಚ್ಚುವರಿ ಭಾರವು ಶೇ. 40ನ್ನು ಮೀರಿದರೆ, ಆಗ 4 ಪಟ್ಟು ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ.
