ನವದೆಹಲಿ,ಮೇ 15- ಪಶ್ಚಿಮ ಏಷ್ಯಾದಲ್ಲಿ ಉಂಟಾಗುತ್ತಿರುವ ಸಂಘರ್ಷದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಏರಿಕೆಯಾದ ಪರಿಣಾಮ ತೈಲ ಕಂಪನಿಗಳು ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್ಗೆ 3 ರೂ. ಹೆಚ್ಚಳ ಮಾಡಿವೆ.
ಇದರ ಜೊತೆಗೆ ಸಿ ಎನ್ ಜಿ ಶ್ರೀಸಾಮಾನ್ಯರಿಗೆ ಮತ್ತೆ ಕತ್ತರಿ ಬಿದ್ದಿದೆ. ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ 3.26 ರೂ. ಹಾಗೂ ಡೀಸೆಲ್ ಬೆಲೆ 3.12 ರೂ. ಹೆಚ್ಚಳ ಆಗಿದೆ. ಅದೇ ರೀತಿ ಮೆಟ್ರೋ ಸಿಟಿಗಳಾದ ದೆಹಲಿ, ಕೋಲ್ಕತ್ತಾ, ಮುಂಬೈ, ಚೆನ್ನೈನಲ್ಲೂ ಹೆಚ್ಚಳ ಆಗಿದೆ.
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಇಂದಿನ ಈ ಘೋಷಣೆ ಗಾಯದ ಮೇಲೆ ಬರೆ ಎಳೆದಂತೆ ಭಾಸವಾಗುತ್ತಿದೆ.ನೂತನ ಪರಿಷ್ಕೃತ ದರವು ಇಂದು ಬೆಳಗ್ಗೆ ಜಾರಿ ಆಗಿದ್ದು ವಾಹನ ಸವಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕಳೆದ ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆ ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಮಿತವಾಗಿ ಬಳಸಬೇಕೆಂದು ಕರೆಕೊಟ್ಟ ಬೆನ್ನಲ್ಲೇ ತೈಲ ಕಂಪನಿಗಳು ದರ ಹೆಚ್ಚಳ ಮಾಡಿರುವುದು ವಿಶೇಷ.
ಹಾರ್ಮುಜ್ ಬಿಕ್ಕಟ್ಟಿದ್ದರೂ ದೇಶದಲ್ಲಿ ಇಂಧನ ಪೂರೈಕೆ ಸಮಸ್ಯೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿತ್ತು. ಪೆಟ್ರೋಲ್ ಡೀಸೆಲ್ ಸಂಗ್ರಹಿಸಿಟ್ಟು, ಪ್ಯಾನಿಕ್ ಸ್ಥಿತಿಗೆ ಒಳಗಾಗುವ ಅಗತ್ಯ ಇಲ್ಲ ಎಂದಿತ್ತು. ಅಧಿಕಾರಿಗಳ ಪ್ರಕಾರ 60 ದಿನಗಳಿಗೆ ಬೇಕಾದಷ್ಟು ತೈಲ ಸಂಗ್ರಹಣೆ ಹಾಗೂ 45 ದಿನಗಳಿಗೆ ಬೇಕಾದಷ್ಟು ಎಲ್ ಪಿಜಿ ಸಂಗ್ರಹಣೆಯನ್ನು ನಿರ್ವಹಣೆ ಮಾಡಲಾಗುತ್ತ್ತದೆ ಎಂದು ಹೇಳಿದ್ದರು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಉಂಟಾದ ನಷ್ಟದಿಂದಾಗಿ ತೈಲ ಕಂಪನಿಗಳು ಬೆಲೆ ಏರಿಕೆ ಮಾಡಿವೆ.ವಾಹನ ಸವಾರರಿಗೆ ಇದು ದೊಡ್ಡ ಆರ್ಥಿಕ ಹೊಡೆತ ನೀಡಿದೆ.
ಡೀಸೆಲ್ ಬೆಲೆ ಹೆಚ್ಚಾದರೆ ಅದರ ನೇರ ಪರಿಣಾಮ ಸರಕು ಸಾಗಣೆ ವಾಹನಗಳ ಮೇಲೆ ಬೀರುತ್ತದೆ. ಇದರಿಂದ ತರಕಾರಿ, ಹಣ್ಣು ಮತ್ತು ಇತರೆ ದಿನಬಳಕೆಯ ವಸ್ತುಗಳ ಸಾಗಣೆ ವೆಚ್ಚ ಹೆಚ್ಚಾಗಿ, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಇವುಗಳ ಬೆಲೆ ಕೂಡ ಏರಿಕೆಯಾಗುವ ಸಾಧ್ಯತೆಯಿದೆ. ಅಂದರೆ, ಈ 3 ರೂ. ಏರಿಕೆ ಕೇವಲ ಪೆಟ್ರೋಲ್ ಬಂಕ್ಗೆ ಮಾತ್ರ ಸೀಮಿತವಾಗಿಲ್ಲ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಉಂಟಾಗುವ ಏರಿಳಿತಗಳು ದೇಶೀಯ ಮಾರುಕಟ್ಟೆಯ ಮೇಲೆ ನೇರ ಪ್ರಭಾವ ಬೀರುತ್ತವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯದ ಕುಸಿತವೇ ಈ ಇಂದಿನ ಹೆಚ್ಚಳಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ತೈಲ ಕಂಪನಿಗಳು ಈ ನಷ್ಟವನ್ನು ಸರಿದೂಗಿಸಲು ಬೆಲೆ ಏರಿಕೆಯ ಹಾದಿ ಹಿಡಿದಿವೆ.
ಲಾರಿ, ಟ್ಯಾಕ್ಸಿಮತ್ತು ಚಾಲಕರಿಗೆ ಈ ಬೆಲೆ ಏರಿಕೆ ಗಂಟಲಲ್ಲಿ ಗಾಳ ಹಾಕಿದಂತಾಗಿದೆ. ದಿನವಿಡೀ ದುಡಿದರೂ ಬರುವ ಲಾಭದ ಬಹುಪಾಲು ಇಂಧನ ಕೊಳ್ಳುವುದಕ್ಕೇ ಖರ್ಚಾಗುತ್ತಿದೆ. ಇದರಿಂದ ಬಾಡಿಗೆ ದರಗಳನ್ನು ಹೆಚ್ಚಿಸುವ ಒತ್ತಡಕ್ಕೆ ಸಾರಿಗೆ ಮಾಲೀಕರು ಸಿಲುಕಿದ್ದಾರೆ. ಇದು ಪ್ರಯಾಣಿಕರ ಜೇಬಿಗೂ ಕತ್ತರಿ ಹಾಕಲಿದೆ.
ತೈಲ ಮಾರಾಟ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಇಂಧನ ದರ ಏರಿಕೆಗೆ ಅನುಗುಣವಾಗಿ ದರವನ್ನು ಏರಿಕೆ ಮಾಡಿವೆ. ಪರಿಷ್ಕೃತ ದರ ಇಂದು ಬೆಳಿಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ದರ 106.17 ರೂ. ಏರಿಕೆಯಾದರೆ ಡೀಸೆಲ್ ದರ 94.10 ರೂ. ತಲುಪಿದೆ.
ಬೆಲೆ ಏರಿಕೆಗೆ ಕಾರಣ ಏನು? :
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸತತ ಏರಿಳಿತವಾಗುತ್ತಿದೆ. ಪಶ್ಚಿಮ ಏಷ್ಯಾ ಹಾಗೂ ಇರಾನ್ ಸಂಘರ್ಷದಿಂದಾಗಿ ತೈಲ ಸಾಗಣೆಯ ಜಲಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿದೆ. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದರಿಂದ ಆಮದು ವೆಚ್ಚ ಹೆಚ್ಚಾಗಿದ್ದರಿಂದ ದರ ಏರಿಕೆ ಮಾಡಲಾಗಿದೆ.
ಜನರ ಮೇಲೆ ಪರಿಣಾಮ ಏನು? :
ಟೆಂಪೋ ಮತ್ತು ಟ್ರಕ್ಗಳು ಡೀಸೆಲ್ ಬಳಸುವುದರಿಂದ ಸರಕು ಸಾಗಣೆ ದರಗಳು ತಕ್ಷಣವೇ ದುಬಾರಿಯಾಗಲಿವೆ. ಸಾಗಣೆ ವೆಚ್ಚ ಹೆಚ್ಚಾಗುವುದರಿಂದ ಮಾರುಕಟ್ಟೆಗೆ ಬರುವ ತರಕಾರಿ, ಹಣ್ಣು, ಧಾನ್ಯಗಳು ಮತ್ತು ಹಾಲಿನ ಬೆಲೆಗಳು ಹೆಚ್ಚಾಗಲಿವೆ. ಖಾಸಗಿ ಬಸ್ಸುಗಳು, ಆಟೋ ಮತ್ತು ಟ್ಯಾಕ್ಸಿಗಳ ಪ್ರಯಾಣ ದರವೂ ಏರಿಕೆಯಾಗಲಿದೆ.
ಮಾರ್ಚ್ 2024 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ಗೆ 2 ರೂ.ಗಳಷ್ಟು ಕಡಿತಗೊಳಿಸಲಾಗಿತ್ತು.
2022 ರಲ್ಲಿ 8 ರೂ. ಕಡಿತ :
ಮೇ 2022ರಲ್ಲಿ ಅಬಕಾರಿ ಸುಂಕ ಕಡಿತವಾಗಿದ್ದರಿಂದ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 8 ರೂ. ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 6 ರೂ.ಗಳಷ್ಟು ಇಳಿಕೆಯಾಗಿತ್ತು. ಕೇಂದ್ರದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ವ್ಯಾಟ್ ಕಡಿಮೆ ಮಾಡಿದ್ದರಿಂದ, ಗ್ರಾಹಕರಿಗೆ ಒಟ್ಟಾರೆಯಾಗಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಸುಮಾರು 9.5 ರೂ. ಮತ್ತು ಡೀಸೆಲ್ ಮೇಲೆ 7 ರೂ. ರಷ್ಟು ದರ ಇಳಿಕೆಯ ಲಾಭ ಸಿಕ್ಕಿತ್ತು.
ಸಿಎನ್ಜಿ ದರ ಹೆಚ್ಚಳ :
ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿ ಸಿಎನ್ಜಿ ದರವನ್ನು 2 ರೂ. ಏರಿಸಲಾಗಿದೆ.ಪರಿಷ್ಕೃತ ದರ ಬೆಳಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ 1 ಕೆಜಿ ಸಿಎನ್ಜಿ ದರ 90 ರೂ.ಗೆ ಏರಿಕೆಯಾಗಿದೆ. ವಿವಿಧ ಭಾಗಗಳಲ್ಲಿ ಅಥವಾ ವಿತರಕರ (ಗ್ಯಾಸ್ ಕಂಪನಿಗಳು) ಆಧಾರದ ಮೇಲೆ ಬೆಲೆಯಲ್ಲಿ 0.10 ರಿಂದ 1 ರವರೆಗೆ ವ್ಯತ್ಯಾಸ ಇರಲಿದೆ.
ಆಟೋರಿಕ್ಷಾಗಳು, ಕ್ಯಾಬ್ಗಳು ವೆಚ್ಚ ಕಡಿಮೆ ಮಾಡಲು ಸಿಎನ್ಜಿ ಬಳಸುತ್ತವೆ. ಸಣ್ಣ ಲಾರಿಗಳು, ಟೆಂಪೋಗಳು ಮತ್ತು ಡೆಲಿವರಿ ವ್ಯಾನ್ಗಳು ಸಿಎನ್ಜಿ ಇಂಧನ ಬಳಸುತ್ತವೆ. ಸಿಎನ್ಜಿ ದರ ಏರಿಕೆಯಿಂದ ಈ ವಾಹನಗಳ ಬಾಡಿಗೆ ಏರಿಕೆಯಾಗಲಿದೆ.ಕೋವಿಡ್ ನಂತರ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮಹತ್ವದ ತೀರ್ಮಾನ ತೆಗೆದುಕೊಂಡಿತ್ತು.
ಇತ್ತೀಚೆಗೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಂದಾಗಿ ಇಂಧನ ಬೆಲೆ ಏರಿಕೆಯನ್ನು ತಡೆಯಲಾಗಿತ್ತು. ಈಗ ಎಲ್ಲವೂ ಮುಗಿದಿದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ.
ನೋ ಸ್ಟಾಕ್ ಬೋರ್ಡ್ :
ಈ ಎಲ್ಲ ಸುಳಿವುಗಳಿಂದ ಭಾರತದ ಹಲವಾರು ನಗರಗಳಲ್ಲಿ ನಿನ್ನೆಯಿಂದಲೇ ಪೆಟ್ರೋಲ್ ಪಂಪ್ಗಳಲ್ಲಿ ಪ್ಯಾನಿಕ್ ಖರೀದಿ ಮತ್ತು ದೀರ್ಘ ಸರತಿ ಸಾಲುಗಳು ಕಂಡುಬಂದವು. ಮಾಧ್ಯಮ ವರದಿಯ ಪ್ರಕಾರ, ಗ್ರಾಹಕರು ಪೂರ್ಣ ಟ್ಯಾಂಕ್ ಮರುಪೂರಣಕ್ಕಾಗಿ ನಿನ್ನೆಯಿಂದಲೇ ಪೆಟ್ರೋಲ್ ಪಂಪ್ಗಳತ್ತ ಧಾವಿಸುತ್ತಿದ್ದರು. ಕರ್ನಾಟಕ, ತೆಲಂಗಾಣ, ರಾಜಸ್ಥಾನ ಮತ್ತು ಗುಜರಾತ್ನಂತಹ ರಾಜ್ಯಗಳಲ್ಲಿನ ಕೆಲವು ಪಂಪ್ಗಳಲ್ಲಿ ನೋ ಸ್ಟಾಕ್ ಬೋರ್ಡ್ಗಳು ಕಂಡು ಬಂದಿದ್ದವು.
ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಭಯವು ಗ್ರಾಹಕರು ಮತ್ತು ಇಂಧನ ಚಿಲ್ಲರೆ ವ್ಯಾಪಾರಿಗಳಲ್ಲಿ ವೇಗವಾಗಿ ಹರಡುತ್ತಿದ್ದಂತೆ ಭಾರತದಾದ್ಯಂತ ಹಲವಾರು ಪೆಟ್ರೋಲ್ ಪಂಪ್ಗಳಲ್ಲಿ ದೀರ್ಘ ಸರತಿ ಸಾಲುಗಳು ಮತ್ತು ಇಂಧನ ಖಾಲಿ ಎಂಬ ಬೋರ್ಡ್ಗಳು ಕಂಡುಬಂದವು.
