Saturday, April 18, 2026
Homeರಾಜ್ಯಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಹೊಸ ಅತಿಥಿಗಲು

ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಹೊಸ ಅತಿಥಿಗಲು

4 South African Cheetahs Arrive At Bengaluru's Bannerghatta Biological Park

ಬೆಂಗಳೂರು,ಏ.18- ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ದೂರದ ದಕ್ಷಿಣ ಆಫ್ರಿಕಾದಿಂದ 4 ಚೀತಾಗಳನ್ನು ತರಲಾಗಿದೆ. ಇವುಗಳಲ್ಲಿ 2 ಗಂಡು ಚೀತಾಗಳು ಮತ್ತು 2 ಹೆಣ್ಣು ಚೀತಾಗಳು ಸೇರಿವೆ. ಕರ್ನಾಟಕ ಅರಣ್ಯ ಇಲಾಖೆ ವಿಶೇಷ ಯೋಜನೆಯಡಿ ಈ ಚೀತಾಗಳನ್ನು ತರಿಸಿ, ಬೆಂಗಳೂರಿನ ಪ್ರಸಿದ್ಧ ಮೃಗಾಲಯದಲ್ಲಿ ನೆಲೆಗೊಳಿಸುತ್ತಿದೆ.

ನಿನ್ನೆ ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಚೀತಾಗಳು ಬಂದಿಳಿದಿವೆ. ತಡರಾತ್ರಿ ಬಂದಿದ್ದರೂ, ಅವುಗಳನ್ನು ಬರಮಾಡಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ವತಃ ಹಾಜರಿದ್ದರು.

ಕಲಬುರಗಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೈದ್ರಾಬಾದ್‌ ಮಾರ್ಗವಾಗಿ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದ ಅರಣ್ಯ ಸಚಿವರು, ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ಆಗಮಿಸಿರುವ ಈ ವಿದೇಶೀ ಅತಿಥಿಗಳನ್ನು ಬರಮಾಡಿಕೊಂಡರು.

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಈ ಚೀತಾಗಳಿಗೆ ವಾತಾವರಣ, ಹವಾಮಾನ ಬದಲಾವಣೆಯಾಗುವ ಕಾರಣ ಅವುಗಳಿಗೆ ಯಾವುದೇ ತೊಂದರೆ ಆಗದಂತೆ, ಆರೋಗ್ಯ ಸಮಸ್ಯೆ ಎದುರಾಗದ ರೀತಿಯಲ್ಲಿ ಸೂಕ್ತ ನಿಗಾ ಇಡಬೇಕು, ವನ್ಯಜೀವಿಗಳನ್ನು ಕ್ವಾರಂಟೈನ್‌ನಲ್ಲಿಡಬೇಕು, 30ದಿನಗಳ ಕಾಲ ಗೊತ್ತುಪಡಿಸಿದ ಆಹಾರ ನೀಡಬೇಕು, ಈ ವಿದೇಶಿ ವನ್ಯಜೀವಿಗಳಿಗೆ ಸೋಂಕು ಏನಾದರೂ ಇದೆಯೇ ಎಂದು ಪರಿಶೀಲಿಸಬೇಕು. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸಾಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಪಶುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿಯೇ ಸಿವಂಗಿ ಎಂದು ಕರೆಸಿಕೊಳ್ಳುವ ಚೀತಾಗಳಿದ್ದವು. ಆದರೆ ರಾಜ್ಯದ ಕಾಡಿನಲ್ಲಿ ಇವು ನಾಮಾವಶೇಷ ಆಗಿವೆ. ಹೀಗಾಗಿ ಮೃಗಾಲಯಗಳಲ್ಲಾದರೂ ಇವುಗಳನ್ನು ನೋಡಲು ಅವಕಾಶ ಆಗಬೇಕು. ಈ ನಿಟ್ಟಿನಲ್ಲಿ ಅವುಗಳ ಸುರಕ್ಷತೆಗೆ ಆದ್ಯ ಗಮನ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್‌ ಪನ್ವಾರ್‌ ಅವರಿಗೆ ಸೂಚನೆ ನೀಡಿದರು.

ವಿಮಾನದಿಂದ ಇಳಿಯುವ ಕ್ಷಣದಿಂದಲೇ ಚೀತಾಗಳನ್ನು ಅತ್ಯಂತ ಎಚ್ಚರಿಕೆಯಿಂದ, ನಿಯಮದಂತೆ, ಸುರಕ್ಷಿತವಾಗಿ ಮೃಗಾಲಯದ ಕಡೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ದಕ್ಷಿಣ ಆಫ್ರಿಕಾದಂತಹ ದೂರದ ದೇಶದಿಂದ ಬರುವ ಪ್ರಾಣಿಗಳಿಗೆ ಹವಾಮಾನ, ವಾತಾವರಣ, ಆಹಾರ, ನೀರು ಹೀಗೆ ಹಲವು ವಿಷಯಗಳಲ್ಲಿ ಬದಲಾವಣೆಗಳು ಎದುರಾಗುತ್ತವೆ. ಈ ಹವಾಮಾನ ಬದಲಾವಣೆಯಿಂದ ಚೀತಾಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯದ ದೃಷ್ಟಿಯಿಂದಲೂ ಅವುಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ವೈದ್ಯರ ತಂಡ ಸದಾ ನಿಗಾ ವಹಿಸುತ್ತಿದೆ.

ಸೂಕ್ತ ಕ್ರಮ :
ಹೊಸ ದೇಶ, ಹೊಸ ಪರಿಸರ, ಹೊಸ ಜನ ಇವೆಲ್ಲಕ್ಕಿಂತ ಮೊದಲು ಚೀತಾಗಳು ಇಲ್ಲಿ ಹೊಂದಿಕೊಳ್ಳಬೇಕಿರುವುದರಿಂದ ಅವುಗಳನ್ನು ನೇರವಾಗಿ ಇತರ ಮೃಗಗಳ ನಡುವೆ ಬಿಡದೇ, ಮೊದಲಿಗೆ ಪ್ರತ್ಯೇಕವಾಗಿ ಇಡಲಾಗುತ್ತಿದೆ. ನಿಯಮದಂತೆ 30 ದಿನಗಳ ಕಾಲ ಈ ಚೀತಾಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಕ್ವಾರಂಟೈನ್‌ ಅಂದರೆ, ಇತರ ಪ್ರಾಣಿಗಳ ಸಂಪರ್ಕದಿಂದ ದೂರವಾಗಿ, ಪ್ರತ್ಯೇಕ ಸ್ಥಳದಲ್ಲಿ ಇಟ್ಟು, ಅವುಗಳ ಆರೋಗ್ಯವನ್ನು ನಿಜವಾದ ಗಮನದಿಂದ ಪರೀಕ್ಷಿಸುವ ಅವಧಿಯಾಗಿದೆ.

ಈ 30 ದಿನಗಳ ಅವಧಿಯಲ್ಲಿ ಚೀತಾಗಳ ಆಹಾರ, ನಡೆ-ನುಡಿಗಳು, ಆರೋಗ್ಯ, ರೋಗ ಲಕ್ಷಣಗಳ ಬಗ್ಗೆ ಪ್ರತಿದಿನವೂ ದಾಖಲೆ ಮಾಡಲಾಗುತ್ತದೆ. ಅವುಗಳಿಗೆ ಬೇಕಾದಷ್ಟು ವಿಶ್ರಾಂತಿ, ಸ್ವಚ್ಛವಾದ ವಾತಾವರಣ, ಸಮಯಕ್ಕೆ ಸರಿಯಾದ ಆಹಾರ ಮತ್ತು ನೀರು ಕೊಡಲಾಗುತ್ತದೆ. ಹವಾಮಾನ ತಾಪಮಾನವು ತೀವ್ರವಾಗಿ ಬದಲಾಗದಂತೆ ವಿಶೇಷ ಕೊಠಡಿಗಳನ್ನು ಸಿದ್ಧಪಡಿಸಿ, ಅವುಗಳಿಗೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಲಾಗಿದೆ. ದಕ್ಷಿಣ ಆಫ್ರಿಕಾದ ಹವಾಮಾನಕ್ಕೆ ಹೊಂದಿಕೊಂಡಿದ್ದ ಈ ಚೀತಾಗಳು ಹೀಗೆ ನಿಧಾನವಾಗಿ ನಮ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯವಾಗುತ್ತದೆ.

ಚೀತಾಗಳನ್ನು ನೋಡಿಕೊಳ್ಳಲು ವಿಶೇಷವಾಗಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರ ಕೆಲಸ, ದಿನದ 24 ಗಂಟೆಗಳಲ್ಲೂ ಚೀತಾಗಳ ಮೇಲೆ ಕಣ್ಣಿಟ್ಟುಕೊಂಡು, ಯಾವುದೇ ಅಸಹಜ ವರ್ತನೆ ಕಂಡರೂ ತಕ್ಷಣ ವೈದ್ಯರಿಗೆ ತಿಳಿಸುವುದು. ಹೀಗೆ ನಿರಂತರ ನಿಗಾ ಹಾಗೂ ಆರೈಕೆಯಿಂದ ಚೀತಾಗಳನ್ನು ಆರೋಗ್ಯಕರವಾಗಿ ಬೆಳೆಸುವ ಉದ್ದೇಶ ಅರಣ್ಯ ಇಲಾಖೆಯದ್ದಾಗಿದೆ.

ದಕ್ಷಿಣ ಆಫ್ರಿಕಾದಿಂದ ಬಂದಿರುವ ಈ 4 ಚೀತಾಗಳು ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಆಕರ್ಷಣೆ ಆಗಲಿವೆ. ಕ್ವಾರಂಟೈನ್‌ ಅವಧಿ ಮುಗಿದ ನಂತರ, ಮೃಗಾಲಯಕ್ಕೆ ಬರುವ ಜನರಿಗೆ ಅವುಗಳನ್ನು ನಿಯಮಿತವಾಗಿ ವೀಕ್ಷಿಸುವ ಅವಕಾಶ ದೊರೆಯಲಿದೆ. ಆದರೆ ಅದಕ್ಕೂ ಮುನ್ನ, ಅವುಗಳ ಆರೋಗ್ಯ ಮತ್ತು ಸುರಕ್ಷತೆ ಮೊದಲ ಆದ್ಯತೆಯಾಗಿರುವುದರಿಂದ, ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹೀಗೆ, ದೂರದ ದಕ್ಷಿಣ ಆಫ್ರಿಕಾದಿಂದ ಬಂದ ಈ ಚೀತಾಗಳು ಈಗ ಬೆಂಗಳೂರಿನ ಹೊಸ ಅತಿಥಿಗಳಾಗಿ ಎಲ್ಲರ ಮನಸೆಳೆಯಲು ಸಿದ್ಧವಾಗಿವೆ.

RELATED ARTICLES

Latest News