ಬೆಂಗಳೂರು,ಏ.18- ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮೆ ಸಾಕ್ಷಿಯಾಯಿತು ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
1996 ರಲ್ಲಿ ಎಚ್.ಡಿ.ದೇವೇಗೌಡ ಅವರ ನೇತೃತ್ವದ ಸಂಯುಕ್ತ ರಂಗ ಸರ್ಕಾರವು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಆಗ ಇದೇ ಕಾಂಗ್ರೆಸ್ ಮತ್ತು ಅದರ ಸಹಚರ ಶಕ್ತಿಗಳು ಆ ಪ್ರಯತ್ನವನ್ನು ಸಂಘಟಿತವಾಗಿ ವಿಫಲಗೊಳಿಸಿದ್ದವು ಎಂದು ತಮ ಎಕ್‌್ಸ ಖಾತೆಯಲ್ಲಿ ಅವರು ಟೀಕಿಸಿದ್ದಾರೆ.
ಆಗ ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟಹೆಜ್ಜೆ ಇರಿಸಿದ್ದರು. ಮತ್ತೆ ಅದೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಮೋದಿ ಅವರ ಪ್ರಯತ್ನಕ್ಕೆ ತಡೆಯೊಡ್ಡಿವೆ. ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ಕೂಟದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅಪಮಾನ. ಇದಕ್ಕೆ ಕಾರಣರಾದ ಎಲ್ಲರೂ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರದ ನಾರಿಶಕ್ತಿಗೆ ನನ್ನ ಮನವಿ ಇಷ್ಟೇ, ನಿರಾಶೆ ಬೇಕಿಲ್ಲ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದೊಂದು ದಿನ ನಿಮಗೆ ಅಗ್ರಮನ್ನಣೆ ಸಿಕ್ಕೇ ಸಿಗುತ್ತದೆ. ಶೇ.33ರಷ್ಟು ಮಹಿಳಾ ಮೀಸಲು ಗುರಿ ಸಾಧಿಸುವುದು ಶತಸ್ಸಿದ್ಧ ಎಂದು ಶಪಥ ಮಾಡಿದ್ದಾರೆ.
