ಕೊಯಮತ್ತೂರು,ಏ.18- ತಮಿಳುನಾಡಿನ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರವಾಸಿಗರಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ. ಮೃತಪಟ್ಟವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗು ಎಂಬಲ್ಲಿನ ಸರ್ಕಾರಿ ಎಲ್ಪಿ ಶಾಲೆಯ ಐವರು ಶಿಕ್ಷಕಿಯರು ಸೇರಿದ್ದಾರೆ.
ಮೃತರನ್ನು ಅಜಿತಾ (54), ರಮ್ಲಾ (52), ಸುಹ್ರಾ (43), ಆಶಾ (41), ಮಜೀತ್ (43), ಸಜಿತಾ (45), ಶಕೀಲಾ (37), ರುಕಿಯಾ (39) ಮತ್ತು ಹಿಶಾಂ (12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಲಕ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದ ಪೆರಿಂತಲ್ಮಣ ಮೂಲದ 13 ಸದಸ್ಯರ ತಂಡ ವಾಲ್ಪಾರೈ ಪ್ರವಾಸ ಮುಗಿಸಿ ವಾಪಸಾಗುತ್ತಿತ್ತು. ಚಾಲಕ ಸೇರಿದಂತೆ 13 ಮಂದಿ ಈ ಪ್ರವಾಸಿಗರ ಗುಂಪಿನ ಭಾಗವಾಗಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಭಾರಿ ತಿರುವಿನಲ್ಲಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಸಂಜೆ 5:15ರ ಸುಮಾರಿಗೆ 13ನೇ ಹೇರ್ ಪಿನ್ ಬೆಂಡ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಿಂದ ಕೆಳಕ್ಕೆ ಜಾರಿ 9ನೇ ಹೇರ್ ಪಿನ್ ಬೆಂಡ್ ವರೆಗೆ ಉರುಳಿದೆ.
ಕಡಿದಾದ ಭೂಪ್ರದೇಶ ಮತ್ತು ದಟ್ಟ ಅರಣ್ಯದ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಡಂಪರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ತಿಳಿದು ತುಂಬಾ ದುಃಖವಾಯಿತು. ಈ ಅಪಘಾತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿಯವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
