ಬೆಂಗಳೂರು, ಮೇ 16-ಸುಪ್ರೀಂ ಕೋರ್ಟಿನ ಆದೇಶದಂತೆ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಕಾಲಮಿತಿಯಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕಭವನ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಸುಪ್ರೀಂ ಕೋರ್ಟಿನ ಆದೇಶದಂತೆ ಜೂನ್ 30 ರೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ ಮತ್ತು ಇತರೆ ವಕೀಲರು, ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.
ಯಾವುದೇ ಸಮಸ್ಯೆಯಿಲ್ಲದೆ ಚುನಾವಣೆಗಳನ್ನು ಸುಗಮವಾಗಿ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರವು ಸಾಕಷ್ಟು ಆರ್ಥಿಕ ನೆರವು ಮತ್ತು ಅಗತ್ಯ ಸಿಬ್ಬಂದಿ ಒದಗಿಸುವುದು ಕಡ್ಡಾಯವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣೆಗಳನ್ನು ವಿಳಂಬವಿಲ್ಲದೆ, ಸಕಾಲದಲ್ಲಿ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಸಾರವಾಗಿ ಬೆಂಗಳೂರಿನಲ್ಲಿ ಚುನಾವಣೆಗಳನ್ನು ಸುಗಮ, ಮುಕ್ತ ಮತ್ತು ನ್ಯಾಯಯುತವಾಗಿ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನೆರವು ಒದಗಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ರಂಗನಾಥ್ ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದ ಪತ್ರದಲ್ಲಿ ಕೋರಿದ್ದರು.
ಸಕಾಲದಲ್ಲಿ ಚುನಾವಣೆ ನಡೆಸಿ ಸುಪ್ರೀಂ ಕೋರ್ಟ್‌ನ ಸೂಚನೆಗಳನ್ನು ಪಾಲಿಸುವುದು ಅವಶ್ಯಕ, ಇಲ್ಲದಿದ್ದರೆ ಅದು ನ್ಯಾಯಾಲಯದ ನಿಂದನೆಗೆ ಕಾರಣವಾಗಬಹುದು. ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಪ್ರಜಾಸತ್ತಾತಕ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಂವಿಧಾನದ 74 ನೇ ತಿದ್ದುಪಡಿಯಿಂದ ನೀಡಲಾದ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದು ರಾಜ್ಯ ಸರ್ಕಾರ ಜವಾಬ್ದಾರಿ ಮತ್ತು ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಇಲ್ಲದಿದ್ದರೆ, ಇದು ಜನರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಲಾಗಿದೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದಿದ್ದರೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಗಳ ನಷ್ಟಕ್ಕೂ ಎಡೆ ಮಾಡಿಕೊಡಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
