Homeರಾಜ್ಯಇಂಧನ ಬೆಲೆ ಏರಿಕೆ ಖಂಡಿಸಿ ಎತ್ತಿನಗಾಡಿ ಓಡಿಸುವ ಮೂಲಕ ವಾಟಾಳ್‌ ವಿನೂತನ ಪ್ರತಿಭಟನೆ

ಇಂಧನ ಬೆಲೆ ಏರಿಕೆ ಖಂಡಿಸಿ ಎತ್ತಿನಗಾಡಿ ಓಡಿಸುವ ಮೂಲಕ ವಾಟಾಳ್‌ ವಿನೂತನ ಪ್ರತಿಭಟನೆ

atal Nagaraj stages fresh protest against fuel price hike

ಮಂಡ್ಯ,ಮೇ.17- ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್‌-ಡೀಸೆಲ್‌ ದರ ಹೆಚ್ಚಳ ಖಂಡಿಸಿ ಕನ್ನಡ ಚಳುವಳಿ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಅವರು ಮಂಡ್ಯದಲ್ಲಿ ಎತ್ತಿನಗಾಡಿ ಓಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್ನಿಂದ ಪ್ರಮುಖ ರಸ್ತೆಗಳ ಮೂಲಕ ಸಂಜಯ್‌ ವೃತ್ತದವರೆಗೂ ಕಾರ್ಯಕರ್ತರೊಂದಿಗೆ ಎತ್ತಿನಗಾಡಿ ಮೆರವಣಿಗೆ ನಡೆಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಟಾಳ್‌ ನಾಗರಾಜ್‌, ದೇಶದಲ್ಲಿ ಮತ್ತು ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಬೆಲೆಗಳಿಂದಾಗಿ ಸಾಮಾನ್ಯ ಜನರಿಗೆ ಬದುಕು ನರಕಸದೃಶವಾಗಿದೆ. ಪೆಟ್ರೋಲ್‌, ಡೀಸೆಲ್‌ ಮಾತ್ರವಲ್ಲದೆ ಅಡುಗೆ ಗ್ಯಾಸ್‌‍ ಬೆಲೆಯೂ ಗಗನಕ್ಕೇರಿದೆ. ಗ್ಯಾಸ್‌‍ ಸಿಗದೆ, ಕೊಳ್ಳಲಾಗದೆ ಬಡ ಜನರು ಊಟ ಮಾಡುವುದಕ್ಕೂ ಪರದಾಡುವಂತಹ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ ಎಂದು ಧಿಕ್ಕಾರ ಕೂಗಿದರು.

ಬೆಲೆ ಏರಿಕೆಯಿಂದ ಜನರು ತತ್ತರಿಸಿಹೋಗಿದ್ದರೂ ರಾಜ್ಯದ ಸಚಿವರು ಮೌನ ವಹಿಸಿರುವುದನ್ನು ವಾಟಾಳ್‌ ಕಟುವಾಗಿ ಟೀಕಿಸಿದರು. ಕರ್ನಾಟಕದ ಮಂತ್ರಿಗಳು ತಕ್ಷಣವೇ ಜನರ ಪರವಾಗಿ ನಿಂತು ಬೆಲೆ ಏರಿಕೆ ವಿರುದ್ಧ ಮಾತನಾಡಬೇಕು. ಇಲ್ಲದಿದ್ದರೆ ಅವರಿಗೆ ಮುತ್ತಿಗೆ ಹಾಕಲಾಗುವುದು. ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಇಡೀ ರಾಜ್ಯದ ಜನರ ಹಿತದೃಷ್ಟಿಯಿಂದ ಕರ್ನಾಟಕ ಬಂದ್‌ೞಗೆ ಕರೆ ನೀಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಗಡಿ ವಿಷಯದ ಕುರಿತು ಮಾತನಾಡಿದ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸರ್ಕಾರ ನಿರ್ಣಯ ಮಾಡುವುದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಈ ದ್ರೋಹವನ್ನು ಸಹಿಸುವುದಿಲ್ಲ ಎಂದ ಅವರು, ಸ್ಥಳೀಯ ಆಡಳಿತದ ವಿಫಲತೆ ಹಾಗೂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಬೃಹತ್‌ ಹೋರಾಟ ಮಾಡುವುದಾಗಿ ಪ್ರಕಟಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್‌, ಜಿಲ್ಲಾಧ್ಯಕ್ಷ ಮಂಜುನಾಥ್‌, ಪ್ರಮುಖರಾದ ಪಾರ್ಥಸಾರಥಿ ಸೇರಿದಂತೆ ನೂರಾರು ಕನ್ನಡಪರ ಹೋರಾಟಗಾರರು ಮತ್ತು ಕಾರ್ಯಕರ್ತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

RELATED ARTICLES

Latest News