ಬೆಂಗಳೂರು,ಮಾ.24- ರಕ್ತಚಂದನವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆಂಧ್ರಪ್ರದೇಶದ ಆರೋಪಿಯೊಬ್ಬನನ್ನು ಮಡಿವಾಳ ಠಾಣಾ ಪೊಲೀಸರು ಬಂಧಿಸಿ 7.12 ಲಕ್ಷ ರೂ. ಮೌಲ್ಯದ 281 ಕೆಜಿ ರಕ್ತಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಶೇಖ್‌ಬಾಬಾಜಾನ್ (38) ಬಂಧಿತ ಆರೋಪಿ.
ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಬಳಿಯ ಅರಣ್ಯ ಸರ್ವಿಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಚೀಲದಲ್ಲಿ ರಕ್ತಚಂದನದ ತುಂಡುಗಳನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದನು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ವ್ಯಕ್ತಿಯನ್ನು ವಶಕ್ಕೆ ಪಡೆದು ಚೀಲವನ್ನು ಪರಿಶೀಲಿಸಿದಾಗ ರಕ್ತಚಂದನದ ತುಂಡುಗಳಿರುವುದು ಕಂಡುಬಂದಿದೆ.
ಆರೋಪಿಯನ್ನು ರಕ್ತಚಂದನದ ಬಗ್ಗೆ ವಿಚಾರಿಸಿದಾಗ ಸಮಂಜಸವಾದ ಉತ್ತರ ನೀಡದ ಕಾರಣ ಆತನನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ರಕ್ತಚಂದನದ ಮರದ ತುಂಡುಗಳನ್ನು ಅಕ್ರಮವಾಗಿ ಪಡೆದುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದುದಾಗಿ ಹೇಳಿದ್ದಾನೆ.
ರಕ್ತಚಂದನವನ್ನು ಮಾರಾಟ ಮಾಡುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ತಾಲ್ಲೂಕಿನ ಶ್ಯಾನುಬೋಗನಹಳ್ಳಿಯ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ 275 ಕೆಜಿ ತೂಕದ ರಕ್ತಚಂದನದ 13 ಮರದ ತುಂಡುಗಳನ್ನು ಇಟ್ಟಿರುವುದಾಗಿ ತಿಳಿಸಿದ್ದಾನೆ.
ಆತನ ಮಾಹಿತಿಯಂತೆ ಆ ಸ್ಥಳಕ್ಕೆ ತೆರಳಿ ರಕ್ತಚಂದನವನ್ನು ವಶಪಡಿಸಿಕೊಂಡಿದ್ದು, ಒಟ್ಟಾರೆ 7.12 ಲಕ್ಷ ರೂ. ಮೌಲ್ಯದ 285 ಕೆಜಿ ರಕ್ತಚಂದನದ 16 ಮರದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌ಸ್ಪೆಕ್ಟರ್ ಮೊಹಮದ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಈ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಮಡಿವಾಳ ಠಾಣಾ ಪೊಲೀಸರು ಶೋಧ ಕೈಗೊಂಡಿದ್ದಾರೆ.
ರಾಜಧಾನಿಯಲ್ಲಿ ಕದ್ದ ಚಿನ್ನಾಭರಣ ಗೋವಾದಲ್ಲಿ ಮಾರಾಟ
ಬೆಂಗಳೂರು, ಮಾ.24- ಮನೆ ಬಾಗಿಲ ಬೀಗ ಮುರಿದು ಒಳನುಗ್ಗಿ ಹಣ-ಆಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದ ಮನೆಗಳ್ಳನೊಬ್ಬನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿ 79 ಲಕ್ಷ ವೌಲ್ಯದ 527 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಹೊಯ್ಸಳ ನಗರದಲ್ಲಿ ವಾಸವಿರುವ ಪಿರ್ಯಾದುದಾರರ ಮಗ ಮತ್ತು ಸೊಸೆ ಅವರ ಮನೆ ಸಮೀಪವೇ ಬೇರೊಂದು ಮನೆಯಲ್ಲಿ ವಾಸವಾಗಿದ್ದು, ಮಗ-ಸೊಸೆ ತಮಿಳುನಾಡಿಗೆ ಹೋಗಿದ್ದರು.
ಆ ಸಂದರ್ಭದಲ್ಲಿ ಮಗನ ಮನೆ ಬಳಿ ಹೋಗಿ ನೋಡಿದಾಗ ಮನೆಯ ಬಾಗಿಲ ಬೀಗ ಮುರಿದಿರುವುದು ಕಂಡುಬಂದಿದೆ. ತಕ್ಷಣ ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿದ್ದ ಚಿನ್ನಾಭರಣ ಕಳುವಾಗಿರುವುದು ಕಂಡುಬಂದಿದ್ದು, ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿಯನ್ನು ಬಾಡಿ ವಾರೆಂಟ್ ಮೂಲಕ ತಮ್ಮ ಅಭಿರಕ್ಷೆಗೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.
ಕಳ್ಳತನ ಮಾಡಿದ ಆಭರಣಗಳನ್ನು ಗೋವಾದಲ್ಲಿರುವ ಎರಡು ಜ್ಯುವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಆತನ ಮಾಹಿತಿಯಂತೆ ಗೋವಾಗೆ ತೆರಳಿದ ಒಂದು ತಂಡ ಎರಡು ಜ್ಯುವೆಲರಿ ಅಂಗಡಿಗಳಿಂದ 79 ಲಕ್ಷ ವೌಲ್ಯದ 527 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದೆ.
ಆರೋಪಿ ಬಂಧನದಿಂದ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆರು ಕನ್ನಗಳವು ಪ್ರಕರಣಗಳು ಪತ್ತೆಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ರಾಮಮೂರ್ತಿನಗರ ಠಾಣೆ ಇನ್‌್ಸ ಪೆಕ್ಟರ್ ಸತೀಶ್ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು.
ಚಿಕ್ಕಂದಿನಿಂದಲೇ ಕಳ್ಳತನದ ಹಾದಿ ಹಿಡಿದಿದ್ದ ನೇಪಾಳಿ ಬಂಧನ
ಬೆಂಗಳೂರು, ಮಾ.24- ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಎಚ್‌ಎಎಲ್ ಠಾಣಾ ಪೊಲೀಸರು ಬಂಧಿಸಿ 16 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 64 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ನೇಪಾಳ ಮೂಲದ ರೂಪಕ್‌ಬಾಬು ಅಲಿಯಾಸ್ ರೂಪಕ್ ಅಲಿಯಾಸ್ ನೇಪಾಳಿ (27) ಬಂಧಿತ ಚೋರ. ಈತನ ತಂದೆ-ತಾಯಿ ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದು, ತಂದೆ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾರೆ.
ಆರೋಪಿ ನಗರದಲ್ಲೇ ಹುಟ್ಟಿ ಬೆಳೆದಿದ್ದಾನೆ. ಲಗ್ಗೆರೆಯಲ್ಲಿ ಆತ ವಾಸವಾಗಿದ್ದು ಚಿಕ್ಕ ವಯಸ್ಸಿನಿಂದಲೇ ಕಳ್ಳತನದ ಹಾದಿ ಹಿಡಿದಿದ್ದ. ಇದೀಗ ಮೊಬೈಲ್ ಕಳವು ವೃತ್ತಿ ಬೆಳೆಸಿಕೊಂಡಿದ್ದನು. ಜೊತೆಗೆ ಸಣ್ಣ-ಪುಟ್ಟ ವೆಲ್ಡಿಂಗ್ ಕೆಲಸ ಮಾಡುತ್ತಿದ್ದನು.
ಬನಶಂಕರಿ 2ನೇ ಹಂತದ ನಿವಾಸಿಯಾಗಿರುವ ಆಟೋ ಚಾಲಕರೊಬ್ಬರು ತಮ ಆಟೋದ ಡ್ಯಾಶ್ ಬೋರ್ಡ್‌ನಲ್ಲಿಟ್ಟು ಎಚ್‌ಎಎಲ್ ಪೌಂಡ್ರಿ ಮತ್ತು ಪೋರ್ಜಿ ಡಿವಿಷನ್‌ನ ಕ್ಯಾಂಟೀನ್ ಸ್ಥಳದಲ್ಲಿ ಆಟೋ ನಿಲ್ಲಿಸಿ ಅಡುಗೆ ಕೆಲಸಕ್ಕೆ ಹೋಗಿದ್ದಾರೆ. ಸಂಜೆ ವಾಪಸ್ ಕೆಲಸ ಮಾಡಿಕೊಂಡು ಬಂದಾಗ ಆಟೋ ಡ್ಯಾಶ್‌ಬೋರ್ಡ್ ಮುರಿದಿರುವುದು ಗಮನಕ್ಕೆ ಬಂದಿದೆ. ತಕ್ಷಣ ನೋಡಿದಾಗ ಅದರೊಳಗಿದ್ದ ಮೊಬೈಲ್‌ಗಳು ಇರಲಿಲ್ಲ. ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ಕ್ಯಾಂಟಿನ್ ಬಳಿಯೇ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.
ಈ ಪ್ರಕರಣವಲ್ಲದೇ ನಗರದ ವಿವಿಧ ಕಡೆಗಳಲ್ಲಿ ಮೊಬೈಲ್ ಸುಲಿಗೆ ಮತ್ತು ಹೈವೆ ರಸ್ತೆಗಳಲ್ಲಿ ಲಾರಿ ಚಾಲಕರ ಮೊಬೈಲ್‌ಗಳು, ಆಟೋ, ಕ್ಯಾಬ್‌ನಲ್ಲಿ ಚಾಲಕರುಗಳ ಮೊಬೈಲ್‌ಗಳನ್ನು ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಡ್ಯಾಶ್ ಬೋರ್ಡ್‌ಗಳನ್ನು ಮುರಿದು ಮೊಬೈಲ್ ಫೋನ್‌ಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಆರೋಪಿಯಿಂದ 14 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡು, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಗರದ ಹಲವು ಕಡೆಗಳಲ್ಲಿ ಕಳವು ಮಾಡಿದ ಮೊಬೈಲ್ ಫೋನ್‌ಗಳನ್ನು ಮುರುಗೇಶ್ ಪಾಳ್ಯದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುವ ಪರಿಚಯಸ್ಥನ ರೂಮ್‌ನಲ್ಲಿಟ್ಟಿರುವುದಾಗಿ ಹೇಳಿದ್ದಾನೆ.
ಆರೋಪಿಯ ಮಾಹಿತಿಯಂತೆ ರೂಮ್‌ನಲ್ಲಿದ್ದ 50 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಒಟ್ಟು 16 ಲಕ್ಷ ಮೌಲ್ಯದ 64 ಮೊಬೈಲ್ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಇನ್‌ಸ್ಪೆಕ್ಟರ್ ಅಜರುದ್ದೀನ್ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.
ಆರೋಪಿಯ ಬಂಧನದಿಂದ ಎಚ್‌ಎಎಲ್ ಪೊಲೀಸ್ ಠಾಣೆಯ ಒಂದು ಮೊಬೈಲ್ ಕಳವು ಪ್ರಕರಣ ಪತ್ತೆಯಾಗಿದ್ದು ಉಳಿದ 63 ಮೊಬೈಲ್ ಫೋನ್‌ಗಳ ವಾರಸುದಾರರು ಪತ್ತೆಯಾಗಬೇಕಾಗಿದೆ.
