ಬೆಂಗಳೂರು,ಮಾ.1- ನಗರದ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಬೃಹತ್ ಹಾಸಿಗೆ, ಸೋಫ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದ್ದರಿಂದ ಸುತ್ತಮುತ್ತಲಿನ ನಾಗರಿಕರು ಆತಂಕಗೊಂಡಿದ್ದಾರೆ.
ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜಾನಪುರ ಸಮೀಪದ ಕೆಂಬತ್ತಹಳ್ಳಿಯಲ್ಲಿ ಬೃಹತ್ ಹಾಸಿಗೆ ಗೋದಾಮು ಇದೆ. ಇಲ್ಲಿ ಹಾಸಿಗೆ ಹಾಗೂ ಸೋಫಾ ತಯಾರಿಸಲಾಗುತ್ತದೆ. ಇಂದು ಬೆಳಗ್ಗೆ 8.15ರ ಸುಮಾರಿನಲ್ಲಿ ಈ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.
ಅಗ್ನಿಶಾಮಕ ದಳದಸಿಬ್ಬಂದಿ 8 ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಈ ಗೋದಾಮಿನ ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಮೂರು ಕಾರುಗಳು ಹಾಗೂ ಎರಡು ಗೂಡ್ಸ್ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಈ ಗೋದಾಮು ಅಕ್ಕಪಕ್ಕದಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳಿಗೂ ಬೆಂಕಿ ತಗುಲಿದ್ದರಿಂದ ಸೈಡ್‌ಗ್ಲಾಸ್‌ಗಳು ಸುಟ್ಟು ಮೆಲ್ಟಾಗಿವೆ.
ಈ ಅಪಾರ್ಟ್‌ಮೆಂಟ್‌ಗಳಲ್ಲಿರುವ ನಿವಾಸಿಗಳನ್ನು ಮತ್ತೊಂದು ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ. ಬೆಂಕಿಯ ದಟ್ಟ ಹೊಗೆ ಆಕಾಶದೆತ್ತರಕ್ಕೆ ಆವರಿಸಿದ್ದು, ಬೆಂಕಿ ಅವಘಡಕ್ಕೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ತಲ್ಲಘಟ್ಟಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಒಂದು ವಾರದ ಹಿಂದೆಯಷ್ಟೇ ನೆಲಮಂಗಲದ ಪರ್ಫ್ಯೂಮ್ ಕಾರ್ಖಾನೆ ಹೊತ್ತಿ ಉರಿದಿತ್ತು. ಅಲ್ಲದೆ ನಾಲ್ಕು ದಿನಗಳ ಹಿಂದೆ ನಗರದ ಚಿಕ್ಕಪೇಟೆಯ ಕುಂಬಾರಪೇಟೆಯಲ್ಲಿ ವಾಣಿಜ್ಯ ಕಟ್ಟಡ ಹೊತ್ತಿ ಉರಿದಿತ್ತು. ಈ ಎರಡು ಘಟನೆಗಳು ಮಾಸುವ ಮುನ್ನವೇ ಇದೀಗ ಹಾಸಿಗೆ ಗೋದಾಮಿನಲ್ಲಿ ಬೆಂಕಿ ಕಾಣಸಿಕೊಂಡಿದೆ.
