ಬೆಂಗಳೂರು,ಮಾ.9-ಷೇರು ಮಾರುಕಟ್ಟೆಯಲ್ಲಿ ನಷ್ಟ ಹಾಗೂ ಸಾಲಗಾರರ ಕಾಟದಿಂದ ಬೇಸತ್ತು ವ್ಯಕ್ತಿಯೊಬ್ಬರು ರೈಲಿಗೆ ತಲೆ ಕೊಟ್ಟು ಆತಹತ್ಯೆ ಮಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆತಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಶ್ರೀರಾಮಪುರಂ ನಿವಾಸಿ ವೆಂಕಟೇಶ (50) ಎಂದು ಗುರುತಿಸಲಾಗಿದೆ.ಷೇರು ಮಾರುಕಟ್ಟೆಯಲ್ಲಿ ವೆಂಕಟೇಶ್ ಅವರು ಹಣ ಹೂಡಿಕೆ ಮಾಡಿದ್ದರು. ಆದರೆ ಅದರಿಂದ ನಷ್ಟವಾಗಿದೆ, ಆ ಹಣವನ್ನು ಸರಿದೂಗಿಸಲು ಹೆಚ್ಚಾಗಿ ಸಾಲ ಮಾಡಿಕೊಂಡಿದ್ದರು. ಅಲ್ಲದೇ ಅವರಿಗೆ ಅನಾರೋಗ್ಯದ ಸಮಸ್ಯೆಯೂ ಸಹ ಇತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದರಿಂದ ನೊಂದಿದ್ದ ವೆಂಕಟೇಶ್ ಅವರಿಗೆ ಸಾಲ ಕೊಟ್ಟವರು ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದರು. ಹಣ ಹೊಂದಿಸಲಾಗದೇ ವೆಂಕಟೇಶ್ ಅವರು ಆತಹತ್ಯೆಗೆ ನಿರ್ಧರಿಸಿದ್ದಾರೆ. ನಿನ್ನೆ ಸಂಜೆ ಲೊಟ್ಟೆಗೊಲ್ಲಹಳ್ಳಿ ಹಾಗೂ ಹೆಬ್ಬಾಳ ರೈಲು ನಿಲ್ದಾಣಗಳ ಮಧ್ಯೆ ಹಳಿ ಬಳಿ ಬಂದು ಚಲಿಸುವ ರೈಲಿಗೆ ತಲೆ ಕೊಟ್ಟು ಆತಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
