Homeರಾಜ್ಯ11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸೇರಿ ಮೂವರ ಬಂಧನ

11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸೇರಿ ಮೂವರ ಬಂಧನ

Rowdy involved in 11 cases, including three arrested

ಬೆಂಗಳೂರು,ಫೆ.10-ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಸುಮಾರು 8 ಲಕ್ಷ ಬೆಲೆಬಾಳುವ ಟ್ರಾಕ್ಟರ್‌ ಮತ್ತು ಟ್ರಾಲಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ರೌಡಿ ಸೇರಿದಂತೆ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆಪಿನಗರದ 8ನೇ ಹಂತದ ನಿವಾಸಿ, ಕೋಣನಕುಂಟೆ ಪೊಲೀಸ್‌‍ ಠಾಣೆಯ ರೌಡಿ ಶೀಟರ್‌ ಸತೀಶ್‌ಕುಮಾರ್‌ (62), ರಾಯಚೂರು ಮೂಲದ, ಆವಲಹಳ್ಳಿ ಬಿಡಿಎ ಲೇಔಟ್‌ ಶೆಡ್‌ ನಿವಾಸಿ ರವಿಚಂದ್ರ (28) ಹಾಗೂ ಗುಜರಾತ್‌ ಮೂಲದ, ಮಾಗಡಿ ರಸ್ತೆ ಕಾಚೋಹಳ್ಳಿ ನಿವಾಸಿ ಮಗನ್‌ ಹೆಚ್‌. ಪಟೇಲ್‌ (50) ಬಂಧಿತ ಆರೋಪಿಗಳು.

ಕೆಂಗೇರಿ ಪೊಲೀಸ್‌‍ ಠಾಣೆ ವ್ಯಾಪ್ತಿಯ, ಕೆಂಗೇರಿ ಉಪನಗರ ವಳೆಗೇರಹಳ್ಳಿ ನಯರಾ ಪೆಟ್ರೋಲ್‌ ಬಂಕ್‌ ಎದುರು ಖಾಲಿ ಜಾಗದಲ್ಲಿ ಸುಮಾರು 8 ಲಕ್ಷ ಬೆಲೆಬಾಳುವ ಟ್ರಾಕ್ಟರ್‌ ಮತ್ತು ಟ್ರಾಲಿಯನ್ನು ಜ.29 ರಂದು ರಾತ್ರಿ ಮಹದೇವಯ್ಯ ಎಂಬುವವರು ನಿಲ್ಲಿಸಿದ್ದರು.

ಮಾರನೇ ದಿನ ಬೆಳಗಿನ ಜಾವ ಟ್ರಾಕ್ಟರ್‌ ತೆಗೆದುಕೊಳ್ಳಲು ಅವರು ಸ್ಥಳಕ್ಕೆ ಬಂದಾಗ ಆ ಜಾಗದಲ್ಲಿ ಇರಲಿಲ್ಲ. ಸುತ್ತಾಮುತ್ತ ವಿಚಾರಿಸಿದರೂ ಈ ವಾಹನದ ಬಗ್ಗೆ ಮಾಹಿತಿ ಲಭಿಸಿಲ್ಲ. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಅರಿತು ಆರೋಪಿಗಳನ್ನು ಪತ್ತೆ ಹಚ್ಚಲು ನೈರುತ್ಯ ವಿಭಾಗದ ಉಪ ಪೊಲೀಸ್‌‍ ಆಯುಕ್ತರಾದ ಅನಿತಾ ಬಿ.ಹದ್ದಣ್ಣನವರ್‌ ಅವರು ತಂಡವನ್ನು ರಚಿಸಿದ್ದರು. ಈ ತಂಡ ಕಾರ್ಯಾಚರಣೆ ಕೈಗೊಂಡು ಸುದೀರ್ಘವಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ.

ಈ ಖಚಿತ ದೃಶ್ಯಾವಳಿ ಆಧರಿಸಿ ಆರೋಪಿಗಳಾದ ಸತೀಶ್‌ ಕುಮಾರ್‌ ಮತ್ತು ರವಿಚಂದ್ರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮತ್ತೊಬ್ಬ ಆರೋಪಿ ಮಗನ್‌ ಹೆಚ್‌ ಪಟೇಲ್‌ನ ಹೆಸರು ಬಾಯ್ಬಿಟ್ಟಿದ್ದು, ಆತನನ್ನು ಸಹ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂವರನ್ನು ವಿಚಾರಣೆಗೆ ಒಳಪಡಿಸಿ ಕಳ್ಳತನ ಮಾಡಿದ್ದ ಟ್ರಾಕ್ಟರ್‌ ಮತ್ತು ಟ್ರಾಲಿ ವಶಪಡಿಸಿಕೊಂಡಿದ್ದು, ಇದರ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಈ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗ ಒಳಪಡಿಸಿದಾಗ ಸಹಚರರಾದ ಡ್ಯಾನಿಯಲ್‌ ಮತ್ತು ಮಂಜುನಾಥ್‌ ಅಲಿಯಾಸ್‌‍ ಅಂಬರೀಶ್‌ನೊಂದಿಗೆ ಸೇರಿಕೊಂಡು ಈ ಕಳ್ಳತನ ಮಾಡಿರುವುದಾಗಿ ಹೇಳಿದ್ದಾರೆ.

ಆರೋಪಿ ಸತೀಶ್‌ಕುಮಾರ್‌ ವಿರುದ್ಧ ಕೊಲೆಯತ್ನ, ಅತ್ಯಾಚಾರ,ಮಾನಭಂಗ, ಸುಲಿಗೆ 5, ಹಲ್ಲೆ 2 ಹಾಗೂ ಐಟಿ ಆಕ್ಟ್‌ ಅಡಿ 1 ಪ್ರಕರಣ ದಾಖಲಾಗಿವೆ. ಕೋಣನಕುಂಟೆ ಠಾಣೆಯಲ್ಲಿ 3, ಪುಟ್ಟೇನಹಳ್ಳಿ, ಹಾರೋಹಳ್ಳಿ, ಸುಬ್ರಮಣ್ಯನಗರ, ಮಹಾಲಕ್ಷ್ಮೀ ಲೇಔಟ್‌, ಬಾಗಲ ಗುಂಟೆ, ಗೋವಿಂದರಾಜುನಗರ ಹಾಗೂ ಹಾಸನದ ಹಿರಿಸಾವೆ ತಲಾ 1 ಪ್ರಕರಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬರಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತವೆ.

ಮತ್ತೊಬ್ಬ ಆರೋಪಿ ರವಿಚಂದ್ರನ ವಿರುದ್ಧ ನಗರದ ವರ್ತೂರು ಪೊಲೀಸ್‌‍ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಚಿಕ್ಕಬಳ್ಳಾಪುರ ಪೊಲೀಸ್‌‍ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣಗಳು ಹಾಗೂ ಆರೋಪಿ ಮಗನ್‌ ಹೆಚ್‌.ಪಟೇಲ್‌ ವಿರುದ್ಧ ವಿಲ್ಸನ್‌ ಗಾರ್ಡನ್‌ ಪೊಲೀಸ್‌‍ ಠಾಣೆಯಲ್ಲಿ ಖೋಟಾ ನೋಟು ಚಲಾವಣೆ ಪ್ರಕರಣಗಳು ದಾಖಲಾಗಿರುತ್ತವೆ.

ಕೆಂಗೇರಿ ಉಪವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತ ಬಸವರಾಜು ಎ ತೇಲಿ, ಇನ್‌್ಸಪೆಕ್ಟರ್‌ ಜಗದೀಶ್‌, ಪಿಎಸ್‌‍ಐಗಳಾದ ಹನಮಂತ ಹಾದಿಮನಿ, ಮಂಜುನಾಥ ದಡ್ಡಿಮನಿ, ಎಎಸ್‌‍ಐ ಚಂದ್ರಶೇಖರ್‌, ರಾಜಣ್ಣ ಹಾಗೂ ಸಿಬ್ಬಂದಿಗಳಾದ ಶ್ರವಣಕುಮಾರ್‌, ಸಂತೋಷಕುಮಾರ್‌, ರಾಜು, ಸೈಫನ್‌ ಅಹಮದ್‌ ಅಂಗಡಿ, ಕರಿಯಪ್ಪ ಮಧುಕರ್‌, ಶಬೀರ್‌ ಜಿ, ಪ್ರಶಾಂತ್‌ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News