ಬೆಂಗಳೂರು, ಮೇ 26- ಓಕಳೀಪುರಂ ಅಷ್ಟಪಥ ಕಾರಿಡಾರ್ ಸಮೀಪ ಬಾಕಿ ಇರುವ ಕಾಮಗಾರಿಗಳನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ಚೆನ್ನೈ ರೈಲ್ವೆ ಹಳಿ ಕೆಳಭಾಗದಲ್ಲಿ ರೈಲ್ವೆ ಇಲಾಖೆ ವತಿಯಿಂದ ಈಗಾಗಲೇ ಎರಡು ಬಾಕ್ಸ್ ಪುಶಿಂಗ್ ಕಾರ್ಯಗಳು ಪೂರ್ಣಗೊಂಡಿವೆ. ಈ ಸಂಬಂಧ, ಮೆಜೆಸ್ಟಿಕ್‌ನಿಂದ ರಾಜಾಜಿನಗರದ ಕಡೆಗೆ ತೆರಳುವ ಮಾರ್ಗದ ಒಂದು ಬಾಕ್ಸ್ ಭಾಗದಲ್ಲಿ ವಾಹನಗಳ ಸಂಚಾರಕ್ಕಾಗಿ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯವನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ಸ್ಥಳದಲ್ಲಿ ರೈಲ್ವೆ ನಿಲ್ದಾಣದ ಕಡೆಗೆ ತೆರಳುವ ಬಾಕ್‌್ಸ ಮಾರ್ಗದ ಸಂಪರ್ಕ ರಸ್ತೆ ನಿರ್ಮಾಣ, ಮಳೆನೀರು ಹರಿದು ಹೋಗಲು 1200 ಮಿ.ಮೀ. ವ್ಯಾಸದ ನೀರುಗಾಲುವೆ ನಿರ್ಮಾಣ, ಸುಮಾರು 63 ಮೀಟರ್ ಉದ್ದದ ರಿಟೈನಿಂಗ್ ವಾಲ್ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿಗಳನ್ನು ಕೂಡಲೇ ಆರಂಭಿಸಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ಸ್ಥಳದಲ್ಲಿ ಹೊಸ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಬೇಕಿದ್ದು, ಶೀಘ್ರವಾಗಿ ಕಾಮಗಾರಿ ಆರಂಭಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.ಶಿವಾನಂದ ವೃತ್ತದ ಸಮೀಪದ ಮಾದವನಗರ ರೈಲ್ವೆ ಕೆಳಸೇತುವೆ ಬಳಿ ಪರಿಶೀಲನೆ ನಡೆಸಿದ ವೇಳೆ, ಮಳೆನೀರು ಹರಿವಿಗಾಗಿ ಅಳವಡಿಸಲಾಗಿರುವ ಗ್ರೇಟಿಂಗ್‌ಗಳನ್ನು ಸದಾ ಸ್ವಚ್ಛವಾಗಿರಿಸುವಂತೆ ಸೂಚಿಸಿದರು.
ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಗಮನಿಸಿ, ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ಸ್ಥಳದಲ್ಲಿ ಪಾದಚಾರಿ ಮಾರ್ಗದ ಮೇಲೆ ಮರದ ಅವಶೇಷಗಳು ಹಾಗೂ ಕಟ್ಟಡ ಭಗ್ನಾವಶೇಷಗಳು ಬಿದ್ದಿರುವುದನ್ನು ಗಮನಿಸಿ, ಅವುಗಳನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದರು. ಅಲ್ಲದೆ, ರಸ್ತೆಯ ಭಾಗಕ್ಕೆ ವಾಲಿರುವ ಮರದ ಕೊಂಬೆಗಳನ್ನು ಕತ್ತರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜುಲೈಗೆ ಪೂರ್ಣ: ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ನವರಂಗ್‌ನಿಂದ ಸ್ಟಾರ್ ಬಜಾರ್ ಸಿಗ್ನಲ್‌ವರೆಗಿನ 1.8 ಕಿ.ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ಒಂದು ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.
ಪರಿಶೀಲನೆ ವೇಳೆ ಆಯುಕ್ತರಾದ ರಾಜೇಂದ್ರ ಚೋಳನ್ ಹಾಗೂ ಡಾ. ರಾಜೇಂದ್ರ ಕೆ.ವಿ., ಘನತ್ಯಾಜ್ಯ ನಿಗಮದ ಸಿಇಒ ಕರೀಗೌಡ, ಅಪರ ಆಯುಕ್ತ ವೆಂಕಟ ಚಲಪತಿ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಬಸವರಾಜ್ ಕಬಾಡೆ, ಮಾದೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
