Friday, May 3, 2024
Homeಇದೀಗ ಬಂದ ಸುದ್ದಿರಾಜ್ಯಸಭೆ ಸ್ಥಾನ ಗೆಲ್ಲಲು ಬಿಜೆಪಿ-ಜೆಡಿಎಸ್ ರಣತಂತ್ರ

ರಾಜ್ಯಸಭೆ ಸ್ಥಾನ ಗೆಲ್ಲಲು ಬಿಜೆಪಿ-ಜೆಡಿಎಸ್ ರಣತಂತ್ರ

ಬೆಂಗಳೂರು,ಫೆ.21- ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆ ರಂಗು ಪಡೆದು ಕೊಂಡಿದೆ. ನಾಲ್ಕನೇ ಅಭ್ಯರ್ಥಿಯ ಗೆಲುವಿಗೆ ಕಾಂಗ್ರೆಸ್ ಹಾಗೂ ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಭಾರೀ ರಣತಂತ್ರ ರೂಪಿಸುತ್ತಿವೆ. ಇದರ ನಡುವೆಯೇ ರಾಜ್ಯ ವಿಧಾನಸಭೆ ಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದಿರುವ ಚುನಾವಣಾ ಕಣದಲ್ಲಿರುವ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ನಡೆಸುವಂತೆ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಇದು ಈಗ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಜೆಪಿಯಿಂದ ಸ್ರ್ಪಧಿಸಿರುವ ನಾರಾಯಣ ಸಾ ಭಾಂಡಗೆ ಹಾಗೂ ಜೆಡಿಎಸ್‍ನಿಂದ ಕಣದಲ್ಲಿರುವ ಕುಪೇಂದ್ರ ರೆಡ್ಡಿ ಅವರ ಗೆಲುವಿಗೆ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಒಂದು ಸ್ಥಾನದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದ್ದು, ನಂಬರ್ ಲೆಕ್ಕಾಚಾರ ಗಮನಿಸಿದರೆ ಮೈತ್ರಿಯ ಎರಡನೇ ಅಭ್ಯರ್ಥಿ ಗೆಲುವಿಗೆ ನಾಲ್ಕು ಮತಗಳು ಕಡಿಮೆಯಾಗಲಿವೆ. ಆದರೂ ಕೂಡ ಬಿಜೆಪಿ ಹೈಕಮಾಂಡ್ ಕುಪೇಂದ್ರ ರೆಡ್ಡಿ ಗೆಲುವಿಗೆ ಎಲ್ಲ ಪ್ರಯತ್ನ ನಡೆಸಿ ಎಂದು ಸೂಚಿಸಿರುವುದು ಕುದುರೆ ವ್ಯಾಪಾರದ ಸಾಧ್ಯತೆಯನ್ನು ಹೆಚ್ಚಿಸಿದೆ.

ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್‍ನಲ್ಲಿ 135 ಶಾಸಕರು, ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಇದ್ದು, 137 ಮತಗಳಾಗಲಿವೆ. ದರ್ಶನ್ ಪುಟ್ಟಣ್ಣಯ್ಯ ಅವರ ಮತ ಕೂಡ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೀಳುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ 66 ಹಾಗೂ ಜೆಡಿಎಸ್ 19 ಹಾಗೂ ಜನಾರ್ದನ ರೆಡ್ಡಿ ಅವರ ಒಂದು ಮತ ಸೇರಿ 86 ಮತಗಳು ಆಗಲಿವೆ. ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವಿಗೆ ನಾಲ್ಕು ಮತಗಳು ಕಡಿಮೆಯಾಗಲಿವೆ.

ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ : ಸಿದ್ದರಾಮಯ್ಯ

ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಬಿಜೆಪಿ ನಾಯಕರು ಹಾಗೂ ಎಚ್.ಡಿ. ಕುಮಾರಸ್ವಾಮಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. 6 ರಿಂದ 7 ಶಾಸಕರ ಜೊತೆ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಹೇಳಿದ್ದು, ನಮ್ಮ ಪಕ್ಷದ ಶಾಸಕರಿಗೆ ಕುಮಾರಸ್ವಾಮಿ ಆಫರ್ ನೀಡುವ, ಧಮಕಿ ಹಾಕುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಯಾರಿಗೆಲ್ಲಾ ಫೋನ್ ಮಾಡಿ, ಏನೇನು ಮಾತನಾಡುತ್ತಿದ್ದಾರೆ, ಎಲ್ಲವೂ ನಮಗೆ ತಿಳಿಯುತ್ತಿದೆ.

ಸಂಬಂಧಪಟ್ಟ ಶಾಸಕರೇ ಮಾಹಿತಿ ತಲುಪಿಸುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಕುಮಾರಸ್ವಾಮಿ ಮಾತ್ರವಲ್ಲ, ಅವರ ಮಿತ್ರಪಕ್ಷ ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ ಎಂದು ಹೇಳಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಕುದುರೆ ವ್ಯಾಪಾರ ನಡೆದು ಅಡ್ಡಮತದಾನ ನಡೆಯುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಕಾಂಗ್ರೆಸ್‍ನ ಅಸಮಾಧಾನಿತ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮೈತ್ರಿ ನಾಯಕರು ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇದೆ.

RELATED ARTICLES

Latest News