Homeಜಿಲ್ಲಾ ಸುದ್ದಿಗಳುಮೈಸೂರು ದಸರಾ ಆಹಾರ ಮೇಳದಲ್ಲಿ 216 ಟನ್‌ ತ್ಯಾಜ್ಯ ಸಂಗ್ರಹ

ಮೈಸೂರು ದಸರಾ ಆಹಾರ ಮೇಳದಲ್ಲಿ 216 ಟನ್‌ ತ್ಯಾಜ್ಯ ಸಂಗ್ರಹ

ಮೈಸೂರು,ಅ.27- ದಸರಾ-2026 ರ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇದೇ 11 ರಿಂದ 25ರವರೆಗೆ ಒಟ್ಟು 15 ದಿನಗಳ ಕಾಲ ಆಯೋಜಿಸಲಾಗಿದ್ದ ಭವ್ಯ ಆಹಾರ ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮೇಳದಲ್ಲಿ ಬೃಹತ್‌ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ.

ರಾಜ್ಯದ ವಿವಿಧ ಭಾಗಗಳ ವಿಶೇಷ ತಿನಿಸುಗಳನ್ನು ಸವಿಯಲು ಪ್ರತಿನಿತ್ಯ ಸುಮಾರು 70 ರಿಂದ 80 ಸಾವಿರ ಜನರು ಆಹಾರ ಮೇಳಕ್ಕೆ ಆಗಮಿಸುತ್ತಿದ್ದರು. ಇದರಿಂದಾಗಿ ಪ್ರತಿದಿನ ಅಪಾರ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು.

ತ್ಯಾಜ್ಯ ನಿರ್ವಹಣೆಗೆ ಪಾಲಿಕೆಯಿಂದ ವಿಶೇಷ ಕ್ರಮ :
ಆಹಾರ ಮೇಳದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಮತ್ತು ಒಣ ತ್ಯಾಜ್ಯ ಎಂದು ವಿಂಗಡಿಸಿ, ಅದೇ ದಿನ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮವಹಿಸಲಾಗಿತ್ತು.

ಇದಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ 11 ಆಟೋ ಟಿಪ್ಪರ್‌ಗಳು, 4 ಕಾಂಪ್ಯಾಕ್ಟರ್‌ಗಳು, 40 ಜನರ ಮಾನವ ಸಂಪನೂಲವನ್ನು ನಿತ್ಯ ಮೂರು ಪಾಳಿಗಳಲ್ಲಿ ನಿಯೋಜಿಸಿ ಸ್ವಚ್ಛತೆಯನ್ನು ನಿರ್ವಹಿಸಲಾಗಿದೆ.

216.05 ಮೆಟ್ರಿಕ್‌ ಟನ್‌ ತ್ಯಾಜ್ಯ ಸಂಗ್ರಹ :
ಹಸಿ ಕಸ: 1,81,830 ಕೆಜಿ, ಒಣ ಕಸ: 27,895 ಕೆಜಿ, ಖಾಲಿ ನೀರಿನ ಬಾಟಲ್‌ಗಳು: 6,325 ಕೆಜಿ, ಒಟ್ಟು: 2,16,050 ಕೆಜಿ (216.05 ಮೆಟ್ರಿಕ್‌ ಟನ್‌) ತ್ಯಾಜ್ಯವು 15 ದಿನಗಳಲ್ಲಿ ಸಂಗ್ರಹವಾಗಿದೆ.
ದಸರಾ ಆಹಾರ ಮೇಳದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಲ್ಲಿಯೂ ಕಸ ಬೀಳದಂತೆ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News