Homeಬೆಂಗಳೂರುಶಾಕಿಂಗ್ ವರದಿ : ಬೆಂಗಳೂರಿನ ಮುಂಚೂಣಿ ಕಾರ್ಮಿಕರಲ್ಲಿ ಶ್ವಾಸಕೋಶದ ಸಮಸ್ಯೆ..!

ಶಾಕಿಂಗ್ ವರದಿ : ಬೆಂಗಳೂರಿನ ಮುಂಚೂಣಿ ಕಾರ್ಮಿಕರಲ್ಲಿ ಶ್ವಾಸಕೋಶದ ಸಮಸ್ಯೆ..!

ಬೆಂಗಳೂರು,ಅ.27- ನಗರದಲ್ಲಿ ವಾಯುಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವ ಬಿಎಂಟಿಸಿ ಚಾಲಕರು, ಸಂಚಾರ ಪೊಲೀಸರು, ಪೌರಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆ ಕಡಿಮೆಯಾಗಿರುವುದು ಮೂರು ವರ್ಷಗಳ ಅಧ್ಯಯನದ ವರದಿಯಲ್ಲಿ ಬೆಳಕಿಗೆ ಬಂದಿದೆ.

10,000ಕ್ಕೂ ಹೆಚ್ಚು ಮುಂಚೂಣಿ ಕಾರ್ಮಿಕರನ್ನು ಒಳಗೊಂಡ ಈ ಸಮೀಕ್ಷೆಯು, ವೃತ್ತಿಗೆ ಸಂಬಂಧಿಸಿದ ಆರೋಗ್ಯದ ಅಪಾಯಗಳ ಬಗ್ಗೆ ಗಮನ ಸೆಳೆದಿದೆ.ವಾಯು ಆಕ್ಯುಪೇಷನಲ್‌ ಅಂಡ್‌ ಎನ್ವಿರಾನ್‌ಮೆಂಟಲ್‌ ರೆಸ್ಪಿರೇಟರಿ ಇಲ್‌ನೆಸ್‌‍ ಕ್ಲಿನಿಕ್‌ ನಡೆಸಿದ ಅಧ್ಯಯನದಲ್ಲಿ 4,517 ಬಿಎಂಟಿಸಿ ಚಾಲಕರು, 3,285 ಸಂಚಾರ ಪೊಲೀಸ್‌‍ ಸಿಬ್ಬಂದಿ, 2,169 ನಿರ್ಮಾಣ ಕಾರ್ಮಿಕರು ಮತ್ತು 379 ಪೌರಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಾಲ್ಕೂ ವೃತ್ತಿ ಗುಂಪುಗಳಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆಗೆ ಸಂಬಂಧಿಸಿದ ಅಸಹಜತೆಗಳು ಕಂಡುಬಂದಿವೆ.

ಪೌರಕಾರ್ಮಿಕರಲ್ಲೇ ಹೆಚ್ಚು:
ಪೌರಕಾರ್ಮಿಕರಲ್ಲಿ ಸುಮಾರು ಶೇ.45ರಷ್ಟು ಮಂದಿಗೆ ಶ್ವಾಸಕೋಶದ ಕಾರ್ಯಕ್ಷಮತೆ ಕುಂಠಿತವಾಗಿರುವುದನ್ನು ಸೂಚಿಸುವ ವಿಒಇಆರ್‌ಐಸಿ ಮಾದರಿಯ ಸಮಸ್ಯೆ ಕಂಡುಬಂದಿದೆ. ಬಿಎಂಟಿಸಿ ಚಾಲಕರಲ್ಲಿ ಶೇ.29.5 ಮತ್ತು ಸಂಚಾರ ಪೊಲೀಸರಲ್ಲಿ ಶೇ.28ರಷ್ಟು ಮಂದಿಯಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆ ಕಡಿಮೆಯಾಗಿದೆ. ನಿರ್ಮಾಣ ಕಾರ್ಮಿಕರಲ್ಲಿ ಈ ಪ್ರಮಾಣ ಶೇ.15ರಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಉಸಿರಾಟದ ಗಾಳಿಯ ಹರಿವಿಗೆ ಅಡಚಣೆಯ ಲಕ್ಷಣಗಳು ಬಿಎಂಟಿಸಿ ಚಾಲಕರಲ್ಲಿ ಶೇ.2.6, ಪೌರಕಾರ್ಮಿಕರಲ್ಲಿ ಶೇ.2.3, ನಿರ್ಮಾಣ ಕಾರ್ಮಿಕರಲ್ಲಿ ಶೇ.2.1 ಮತ್ತು ಸಂಚಾರ ಪೊಲೀಸರಲ್ಲಿ ಶೇ.1ರಷ್ಟು ಮಂದಿಯಲ್ಲಿ ಕಂಡುಬಂದಿವೆ.

ವಾಯುಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವ ಈ ಕಾರ್ಮಿಕರಲ್ಲಿ ಮುಖಗವಸು ಬಳಕೆಯ ಪ್ರಮಾಣವೂ ಕಳವಳಕಾರಿ ಅಂಶವಾಗಿದೆ. ಸಮೀಕ್ಷೆಯಲ್ಲಿ ಶೇ.88.2ರಷ್ಟು ಬಿಎಂಟಿಸಿ ಚಾಲಕರು ತಾವು ಎಂದಿಗೂ ಮಾಸ್ಕ್‌ ಬಳಸಿಲ್ಲ ಎಂದು ತಿಳಿಸಿದ್ದಾರೆ. ಸಂಚಾರ ಪೊಲೀಸರಲ್ಲಿ ಈ ಪ್ರಮಾಣ ಶೇ.55, ನಿರ್ಮಾಣ ಕಾರ್ಮಿಕರಲ್ಲಿ ಶೇ.37.9 ಮತ್ತು ಪೌರಕಾರ್ಮಿಕರಲ್ಲಿ ಶೇ.16.3ರಷ್ಟಿದೆ.

ಉಸಿರಾಟದ ಗಾಳಿಯ ಹರಿವಿಗೆ ಅಡಚಣೆಯ ಲಕ್ಷಣಗಳು ಬಿಎಂಟಿಸಿ ಚಾಲಕರಲ್ಲಿ ಶೇ.2.6, ಪೌರಕಾರ್ಮಿಕರಲ್ಲಿ ಶೇ.2.3, ನಿರ್ಮಾಣ ಕಾರ್ಮಿಕರಲ್ಲಿ ಶೇ.2.1 ಮತ್ತು ಸಂಚಾರ ಪೊಲೀಸರಲ್ಲಿ ಶೇ.1ರಷ್ಟು ಮಂದಿಯಲ್ಲಿ ಕಂಡುಬಂದಿವೆ.

ಬೊಜ್ಜು, ಮಧುಮೇಹದ ಅಪಾಯವೂ ಹೆಚ್ಚು
ಶ್ವಾಸಕೋಶದ ಸಮಸ್ಯೆಗಳ ಜತೆಗೆ ಇತರ ಆರೋಗ್ಯ ಸಮಸ್ಯೆಗಳೂ ಕಾರ್ಮಿಕರಲ್ಲಿ ಹೆಚ್ಚಾಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ. ಪೌರಕಾರ್ಮಿಕರಲ್ಲಿ ಶೇ.62ರಷ್ಟು ಮಂದಿ ಅಧಿಕ ತೂಕ ಅಥವಾ ಬೊಜ್ಜಿನಿಂದ ಬಳಲುತ್ತಿದ್ದರೆ, ಬಿಎಂಟಿಸಿ ಚಾಲಕರಲ್ಲಿ ಶೇ.60.7 ಮತ್ತು ಸಂಚಾರ ಪೊಲೀಸರಲ್ಲಿ ಶೇ.51.3ರಷ್ಟು ಮಂದಿ ಇದೇ ಸಮಸ್ಯೆ ಹೊಂದಿದ್ದಾರೆ. ಈ ಪ್ರಮಾಣವು ಅಧ್ಯಯನದಲ್ಲಿ ಉಲ್ಲೇಖಿಸಿರುವ ಭಾರತದ ಸರಾಸರಿ ಶೇ.28.6ಕ್ಕಿಂತ ಹೆಚ್ಚಾಗಿದೆ.

ಬಿಎಂಟಿಸಿ ಚಾಲಕರಲ್ಲಿ ಮಧುಮೇಹದ ಪ್ರಮಾಣ ಶೇ.18.2ರಷ್ಟಿದ್ದು, ಭಾರತದ ಸರಾಸರಿ ಶೇ.11.4ಕ್ಕಿಂತ ಹೆಚ್ಚಾಗಿದೆ. ಸಂಚಾರ ಪೊಲೀಸ್‌‍ ಸಿಬ್ಬಂದಿಯಲ್ಲಿ ಶೇ.14ರಷ್ಟು ಮಂದಿಗೆ ಮಧುಮೇಹವಿರುವುದು ವರದಿಯಾಗಿದೆ. ವಿವಿಧ ವೃತ್ತಿ ಗುಂಪುಗಳಲ್ಲಿ ಅಧಿಕ ರಕ್ತದೊತ್ತಡ ಸೇರಿದಂತೆ ಹೃದಯ ಮತ್ತು ಚಯಾಪಚಯ ಸಂಬಂಧಿತ ಕಾಯಿಲೆಗಳ ಅಪಾಯವೂ ಕಂಡುಬಂದಿದೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 7,635 ಬಿಎಂಟಿಸಿ ನೌಕರರನ್ನು ಪರೀಕ್ಷಿಸಿದಾಗ ಶೇ.40ಕ್ಕಿಂತ ಹೆಚ್ಚು ಮಂದಿ ಹೃದಯರಕ್ತನಾಳದ ಕಾಯಿಲೆಗಳ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಕಂಡುಬಂದಿದೆ.

ಒಟ್ಟಾರೆ ನಗರವನ್ನು ನಿರಂತರವಾಗಿ ಮುನ್ನಡೆಸುವ ಕಾರ್ಮಿಕರ ಆರೋಗ್ಯ ರಕ್ಷಣೆಗೆ ನಿಯಮಿತ ಶ್ವಾಸಕೋಶ ಮತ್ತು ಹೃದಯದ ತಪಾಸಣೆ, ಸುರಕ್ಷತಾ ಸಾಧನಗಳ ಬಳಕೆ, ಕೆಲಸದ ಸ್ಥಳದಲ್ಲಿ ಮಾಲಿನ್ಯ ನಿಯಂತ್ರಣ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಅಗತ್ಯವನ್ನು ಈ ಅಧ್ಯಯನ ಒತ್ತಿ ಹೇಳಿದೆ.

RELATED ARTICLES

Latest News