ಹಾಸನ,ಅ.27- ಟೈರ್ ಸ್ಫೋಟಗೊಂಡು ಸಿಮೆಂಟ್ ಸಾಗಿಸುತ್ತಿದ್ದ ಟ್ರಕ್ ಉರುಳಿಬಿದ್ದಿರುವ ಘಟನೆ ಸಕಲೇಶಪುರದ ಗುಳಗಳಲೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ.ಬೆಂಗಳೂರಿನಿಂದ ಮಂಗಳೂರಿಗೆ ಸಿಮೆಂಟ್ ಚೀಲಗಳನ್ನು ತುಂಬಿಕೊಂಡು ತೆರಳುತ್ತಿದ್ದ ಲಾರಿಯ ಟೈರ್ ಸ್ಫೋಟಗೊಂಡು ಉರುಳಿಬಿದ್ದಿದ್ದು, ಅಪಘಾತದಲ್ಲಿ ಜಾರ್ಖಂಡ್ ಮೂಲದ ಲಾರಿ ಚಾಲಕ ರಾಜೇಶ್ ಯಾದವ್‌ಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದರ ನಡುವೆಯೇ ರಸ್ತೆಯಲ್ಲಿ ಬಿದ್ದಿದ್ದ ಸಿಮೆಂಟ್ ಮೂಟೆಗಳನ್ನು ತಾ ಮುಂದು ನಾ ಮುಂದು ಎಂಬಂತೆ ಜನರು ಹೊತ್ತೊಯ್ಯುತ್ತಿದ್ದ ದೃಶ್ಯಗಳು ಕಂಡುಬಂದವು.ಕೆಲವರು ತಲೆ ಮೇಲೆ ಮೂಟೆ ಹೊತ್ತೊಯ್ಯುತ್ತಿದ್ದರೆ ಕೆಲವರು ಟ್ರ್ಯಾಕ್ಟರ್‌ಗಳು ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಸಿಮೆಂಟ್ ಮೂಟೆಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಅಪಘಾತದ ಬಳಿಕ ಲಾರಿಯನ್ನು ಪೊಲೀಸರು ತೆರವುಗೊಳಿಸಿದರೂ ಸಹ ಸಿಮೆಂಟ್ ಮೂಟೆಗಳು ಅಲ್ಲಿಯೇ ಬಿದ್ದಿದ್ದು, ಅವುಗಳನ್ನು ಸಹ ರಾತ್ರೋರಾತ್ರಿ ಕೆಲ ಜನರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
