ಮೈಸೂರು,ಅ.27- ನಗರದ ಜಾಕಿ ಕ್ವಾಟ್ರಸ್ ಬಳಿಯ ಪಾರ್ಕ್ನಲ್ಲಿ ನಿನ್ನೆ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪಾರ್ಕ್ ಬಳಿ ಇದ್ದ ಸ್ಥಳೀಯರು ಪೊದೆ ಸ್ಲೈಡಿನಲ್ಲಿ ಚಲಿಸುತ್ತಿದ್ದ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಕಂಡ ಸ್ಥಳೀಯರು ತಕ್ಷಣ ಉರಗ ತಜ್ಞ ಸ್ನೇಕ್ ಪ್ರದೀಪ್ ಅವರಿಗೆ ಕರೆ ಮಾಡಿದ್ದಾರೆ. ಕರೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸ್ನೇಕ್ ಪ್ರದೀಪ್, ಟಾರ್ಚ್ ಬೆಳಕಿನಲ್ಲಿ ಅತ್ಯಂತ ಜಾಗರೂಕತೆಯಿಂದ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ.
ರಾತ್ರಿಯಾಗಿದ್ದ ಕಾರಣ ಕಾರ್ಯಾಚರಣೆ ಸ್ವಲ್ಪ ಸವಾಲಿನಿಂದ ಕೂಡಿತ್ತು.ಸೆರೆಹಿಡಿದ ಹೆಬ್ಬಾವನ್ನು ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಸಮುಖದಲ್ಲಿ ನಗರದ ಹೊರ ವಲಯದಲ್ಲಿರುವ ಸಾಮಾಜಿಕ ಅರಣ್ಯದ ಅಂಚಿನಲ್ಲಿ ಸುರಕ್ಷಿತವಾಗಿ ಬಿಡಲಾಯಿತು.
ಪಾರ್ಕ್ನಲ್ಲಿ ರಾತ್ರಿ ವೇಳೆ ಇಂತಹ ದೊಡ್ಡ ಹಾವು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪಾರ್ಕ್ನಲ್ಲಿ ಪೊದೆಗಳನ್ನು ತೆರವುಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
