Homeರಾಜ್ಯSIR ಅಂತಿಮ ಮತದಾರರ ಪಟ್ಟಿ ಪ್ರಕಟ : ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು

SIR ಅಂತಿಮ ಮತದಾರರ ಪಟ್ಟಿ ಪ್ರಕಟ : ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು

ಬೆಂಗಳೂರು,ಅ.27-ಸರಿಸುಮಾರು ಆರು ದಶಕಗಳ ನಂತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ ಈ ಬಾರಿ ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣ ಸುಮಾರು 1 ಕೋಟಿಯಷ್ಟು ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ.

ವಿಶೇಷವೆಂದರೆ 1960ರ ನಂತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಪುರುಷರಿಗಿಂತ ಹೆಚ್ಚು ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ.ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಕ್‌ ಸಮರಕ್ಕೆ ಎಡೆ ಮಾಡಿಕೊಟ್ಟಿದ್ದ ಬಹುನಿರೀಕ್ಷಿತ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ(ಎಸ್‌‍ಐಆರ್‌-2026 ) ಇಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಅವರು ಕರ್ನಾಟಕದ ಮತದಾರರ ಅಂತಿಮ ಕರಡು ಪಟ್ಟಿಯನ್ನು ಮಧ್ಯಾಹ್ನ 3 ಗಂಟೆಗೆ ತಮ ಕಚೇರಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.

ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 4,55,00,011 ಮತದಾರರು ಇದ್ದಾರೆ. ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ನಾಗರಿಕರಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ.

ರಾಜ್ಯದ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆಯು ಮತದಾರರ ವಿವರಗಳ ಪರಿಶೀಲನೆ, ಹೊಸ ಮತದಾರರ ನೋಂದಣಿ, ಹೆಸರುಗಳ ಸೇರ್ಪಡೆ ಮತ್ತು ಆಕ್ಷೇಪಣೆಗಳ ವಿಲೇವಾರಿ ಸೇರಿದಂತೆ ಹಲವು ಹಂತಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಕಟವಾಗುತ್ತಿರುವ ಅಂತಿಮ ಪಟ್ಟಿ ಮಹತ್ವ ಪಡೆದಿದೆ.

ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 2,25,40,493 ಪುರುಷ ಮತದಾರರು, 2,29,12,355 ಮಹಿಳಾ ಹಾಗೂ 2,841 ತೃತೀಯ ಲಿಂಗದ ಮತದಾರರಿದ್ದಾರೆ. ಇದರೊಂದಿಗೆ 44,322 ಸೇವಾ ಮತದಾರರು ಮತ್ತು 3,252 ಸಾಗರೋತ್ತರ ಮತದಾರರು ನೋಂದಣಿಯಾಗಿದ್ದಾರೆ.

18ರಿಂದ 19 ವರ್ಷದೊಳಗಿನ 6,83,364 ಯುವ ಮತದಾರರು, 85 ವರ್ಷ ಮೇಲ್ಪಟ್ಟ 3,92,134 ಹಿರಿಯ ಮತದಾರರು ಹಾಗೂ 5,65,340 ವಿಶೇಷ ಚೇತನ ಮತದಾರರು ಪಟ್ಟಿಯಲ್ಲಿದ್ದಾರೆ. ಈ ಬಾರಿಯ ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯವಾಗಿಯೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪರಿಷ್ಕರಣೆ ವೇಳೆ ವಿವರಗಳಲ್ಲಿ ಹೊಂದಾಣಿಕೆ ಇಲ್ಲದ ಅಥವಾ ಹಿಂದಿನ ಮತದಾರರ ದಾಖಲೆಗಳೊಂದಿಗೆ ಮ್ಯಾಪಿಂಗ್‌ ಆಗದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 43,82,824 ನೋಟಿಸ್‌‍ಗಳನ್ನು ನೀಡಲಾಗಿದ್ದು, ಎಲ್ಲ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅ.23ರಂದು ತಿಳಿಸಿತ್ತು.

ಜೂನ್‌ 16ರಿಂದ ಅ.22ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವುದು ಮತ್ತು ವಿವರಗಳ ತಿದ್ದುಪಡಿಗಾಗಿ ಒಟ್ಟು 25,87,461 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 10,42,863 ಅರ್ಜಿಗಳು ನಮೂನೆ-6ರಡಿ, 4,840 ಅರ್ಜಿಗಳು ನಮೂನೆ-6ಎರಡಿ, 2,28,917 ಅರ್ಜಿಗಳು ನಮೂನೆ-7ರಡಿ ಹಾಗೂ 13,10,841 ಅರ್ಜಿಗಳು ನಮೂನೆ-8ರಡಿ ಸಲ್ಲಿಕೆಯಾಗಿವೆ.

ವಿಶೇಷವಾಗಿ ಸೆ.23ರವರೆಗೆ 58,475ರಷ್ಟಿದ್ದ ನಮೂನೆ-7 ಅರ್ಜಿಗಳ ಸಂಖ್ಯೆ ಅ.22ರ ವೇಳೆಗೆ 2,28,917ಕ್ಕೆ ಏರಿಕೆಯಾಗಿರುವುದು ಗಮನ ಸೆಳೆದಿದೆ.ಬೆಂಗಳೂರಿನ ನಗರ ಜಿಲ್ಲೆಯಲ್ಲಿ 24,268 ಅರ್ಜಿಗಳು, ಜಿಬಿಎ ದಕ್ಷಿಣ ವ್ಯಾಪ್ತಿಯಲ್ಲಿ 19,662 ಮತ್ತು ಉತ್ತರ ವ್ಯಾಪ್ತಿಯಲ್ಲಿ 18,659 ಅರ್ಜಿಗಳು ಸಲ್ಲಿಕೆಯಾಗಿವೆ.

ನಮೂನೆ-7ರ ಸಾಮೂಹಿಕ ಬಳಕೆಯ ಕುರಿತು ಆಡಳಿತಾರೂಢ ಕಾಂಗ್ರೆಸ್‌‍ ಮತ್ತು ಬಿಜೆಪಿ ನಡುವೆ ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲು ಅರ್ಜಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್‌‍ ಆರೋಪಿಸಿದ್ದರೆ, ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಗಳ ಪರಿಶೀಲನೆ ಮತ್ತು ಅರ್ಹ ಮತದಾರರ ಹಕ್ಕುಗಳ ರಕ್ಷಣೆ ಮಹತ್ವ ಪಡೆದಿವೆ.

ಪುರುಷರ ಹಿಂದಿಕ್ಕಿದ ಮಹಿಳಾ ಮತದಾರರು
ರಾಜ್ಯದಲ್ಲಿ ಮತದಾರರ ಅಂತಿಮ ಕರಡು ಪಟ್ಟಿ ಪ್ರಕಟ
ಒಟ್ಟು ಮತದಾರರು- 4,55,00,011
ಮಹಿಳಾ ಮತದಾರರು- 2,29,12,355
ಪುರುಷ ಮತದಾರರು-2,25,40,493
ತೃತೀಯ ಲಿಂಗಿಗಳು -2,841-
ಸೇವಾ ಮತದಾರರು -44,322
18ರಿಂದ 19 ವರ್ಷದೊಳಗಿನವರು -ರ-6,83,364 –
85 ವರ್ಷ ಮೇಲ್ಪಟ್ಟವರು -3,92,134
ವಿಶೇಷ ಚೇತನ ಮತದಾರರು-5,65,340
ಸಾಗರೋತ್ತರ ಮತದಾರರು-3,252

RELATED ARTICLES

Latest News