ಬೆಳಗಾವಿ,ಮಾ.25- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಸದ್ಯಕ್ಕೆ ನಿಲ್ಲುವುದಿಲ್ಲವಂತೆ. ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿ ಪೆಟ್ರೋಲ್, ಡೀಸೆಲ್‌ಗಾಗಿ ನೀರಿನ ಕ್ಯಾನ್, ವಾಟರ್‌ಬಾಟಲ್, ಬ್ಯಾರಲ್ ಹಿಡಿದು ಬಂಕ್‌ಗಳಿಗೆ ಮುಗಿಬಿದ್ದು, ಬೆಳಗಾವಿಯಲ್ಲಿ ಒಂದೇ ದಿನ ಬರೋಬ್ಬರಿ 2 ಲಕ್ಷ ಲೀಟರ್ ಇಂಧನ ಮಾರಾಟವಾಗಿದೆ.
ಈಗಾಗಲೇ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಪೆಟ್ರೋಲ್, ಡೀಸೆಲ್ ಕೂಡಾ ಸಿಗುವುದಿಲ್ಲ ಎಂಬ ವದಂತಿಗೆ ಬೆಚ್ಚಿಬಿದ್ದ ವಾಹನ ಸವಾರರು ನಗರದಲ್ಲಿನ ಪೆಟ್ರೋಲ್ ಬಂಕ್‌ಗೆ ಮುಗಿಬಿದ್ದಿದ್ದರು.
ಕಳೆದ ಮೂರು ದಿನಗಳಿಂದ ಬೆಳಿಗ್ಗೆ 4 ಗಂಟೆಯಿಂದ ಮಧ್ಯರಾತ್ರಿಯವರೆಗೂ ದ್ವಿಚಕ್ರ ವಾಹನ ಸವಾರರು, ಕಾರುಗಳು, ಖಾಸಗಿ ಬಸ್ಸು, ಶಾಲಾ-ಕಾಲೇಜು ಬಸ್ಸುಗಳು ಇಂಧನ ತುಂಬಿಸಿಕೊಳ್ಳಲು ತಾ ಮುಂದು ನಾ ಮುಂದು ಎಂಬಂತೆ ಬಂಕ್‌ಗಳ ಮುಂದೆ ಜಮಾಯಿಸಿದ್ದರು.
ಇದಲ್ಲದೆ ನೀರಿನ ಟ್ಯಾಂಕ್‌ಗಳು, ಬೃಹತ್ ಗಾತ್ರದ ಡ್ರಮ್‌ಗಳನ್ನು ಹಿಡಿದು ಬಂಕ್‌ಗೆ ಬಂದು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು. ಇದರ ಪರಿಣಾಮ 24 ಗಂಟೆಯೊಳಗೆ ಸುಮಾರು 2 ಲಕ್ಷ ಲೀಟರ್ ಇಂಧನ ಮಾರಾಟವಾಗಿದ್ದು, ನಗರದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖಾಲಿಯಾಗಿ ನಿಜವಾದ ಸಮಸ್ಯೆ ಎದುರಾಗಿದೆ.
ಬೆಳಗಾವಿ ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಿದ್ದು, ಇದರಲ್ಲಿ 20 ಬಂಕ್‌ಗಳಲ್ಲಿ ಸಂಪೂರ್ಣವಾಗಿ ಇಂಧನ ಖಾಲಿಯಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.ಬೆಳಗಾವಿ ಅಲ್ಲದೆ ಚಿಕ್ಕೋಡಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಬಂಕ್‌ಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರಕ್ಕೆ ತಳ್ಳಾಟ, ನೂಕಾಟ ವಿಚಾರದಲ್ಲಿ ಬೆಳಗಾವಿಯಲ್ಲಿ ಗಲಾಟೆ ಕೂಡ ನಡೆದಿದೆ.
ಪೆಟ್ರೋಲ್ ಕಳ್ಳರ ಹಾವಳಿ :
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಮನೆಗಳ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿದರೆ ಕ್ಷಣಮಾತ್ರದಲ್ಲಿ ಖಾಲಿ ಟ್ಯಾಂಕ್ ಆಗುತ್ತಿದೆ. ಕಳ್ಳರು ಪೈಪ್‌ಗಳನ್ನು ಕಟ್ ಮಾಡಿ ಕ್ಯಾನ್‌ಗಳಿಗೆ ಪೆಟ್ರೋಲ್ ತುಂಬಿಸಿಕೊಂಡು ಪರಾರಿಯಾಗುತ್ತಿದ್ದಾರೆ. ಕಿಡಿಗೇಡಿಗಳ ಕೃತ್ಯ ವಾಹನ ಸವಾರರ ನಿದ್ರೆಗೆಡಿಸಿದೆ.
ಸದ್ಯಕ್ಕೆ ಇಂಧನದ ಕೊರತೆ ಇಲ್ಲ, ಸಾರ್ವಜನಿಕರು ಆತಂಕಕ್ಕೆ ಒಳಗೊಳಗಾಗಬಾರದೆಂದು ಅಧಿಕಾರಿಗಳು ತಿಳಿಸಿದರೂ ಸಹ ಜನರು ವದಂತಿಗಳಿಗೆ ಕಿವಿಗೊಡುತ್ತಿರುವುದು ವಿಪರ್ಯಾಸ.
