Homeಜಿಲ್ಲಾ ಸುದ್ದಿಗಳುನಿಷೇಧವಿದ್ದರೂ ಮಲಗುಂಡಿ ಸ್ವಚ್ಛತೆಗೆ ಕಾರ್ಮಿಕರ ಬಳಕೆ : ತುಮಕೂರು ಅಮಾನವೀಯ ಘಟನೆ

ನಿಷೇಧವಿದ್ದರೂ ಮಲಗುಂಡಿ ಸ್ವಚ್ಛತೆಗೆ ಕಾರ್ಮಿಕರ ಬಳಕೆ : ತುಮಕೂರು ಅಮಾನವೀಯ ಘಟನೆ

ಇಲ್ಲಿನ ಕೆಇಬಿ ಇಂಜಿನಿಯರ್ಸ್‌ ಸಂಘದ ಆವರಣದಲ್ಲಿ ಮಲ ಹೊರುವ ಪದ್ಧತಿ ನಿಷೇದ ಕಾಯ್ದೆ ಜಾರಿಯಲ್ಲಿದ್ದರೂ ನಾಲ್ವರು ಕೂಲಿ ಕಾರ್ಮಿಕರನ್ನು ಮಲಗುಂಡಿ ಸ್ವಚ್ಛತಾ ಕಾರ್ಯಕ್ಕೆ ಬಳಸಿರುವ ಅಮಾನವೀಯ ಘಟನೆ ನಡೆದಿದೆ.

ತುಮಕೂರು,ಜೂ.27– ಇಲ್ಲಿನ ಕೆಇಬಿ ಇಂಜಿನಿಯರ್ಸ್‌ ಸಂಘದ ಆವರಣದಲ್ಲಿ ಮಲ ಹೊರುವ ಪದ್ಧತಿ ನಿಷೇದ ಕಾಯ್ದೆ ಜಾರಿಯಲ್ಲಿದ್ದರೂ ನಾಲ್ವರು ಕೂಲಿ ಕಾರ್ಮಿಕರನ್ನು ಮಲಗುಂಡಿ ಸ್ವಚ್ಛತಾ ಕಾರ್ಯಕ್ಕೆ ಬಳಸಿರುವ ಅಮಾನವೀಯ ಘಟನೆ ನಡೆದಿದೆ. ಪರಿಶಿಷ್ಟ ಸಮುದಾಯದ ಕಾರ್ಮಿಕರಿಂದ ಬರಿಗೈ, ಬರಿಮೈಯಲ್ಲಿ ಶೌಚಗುಂಡಿಯ ಮಲವನ್ನು ಹೊರಗೆ ತೆಗಿಸಿ ಟ್ರ್ಯಾಕ್ಟರ್‌ಗೆ ತುಂಬಿಸುವ ದೃಶ್ಯ ಸೆರೆಯಾಗಿದ್ದು, ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.

ತುಮಕೂರಿನ ನಂದೀಶ್‌, ಅರುಣ್‌ ಹಾಗೂ ಮಧುಗಿರಿ ಮೂಲದ ಮೂರ್ತಿ ನಾಯ್ಕ, ನವೀನ್‌ ಎಂಬ ನಾಲ್ವರು ಕಾರ್ಮಿಕರನ್ನು ಕೆಇಬಿ ಇಂಜಿನಿಯರ್ಸ್‌ ಸಂಘದಲ್ಲಿನ ಮಲಗುಂಡಿ ಸ್ವಚ್ಚತಾ ಕಾರ್ಯಕ್ಕೆ ನಿಯೋಜಿಸಿದ್ದು, ಇಂಜಿನಿಯರ್‌ರೊಬ್ಬರ ಸೂಚನೆ ಮೇರೆಗೆ ಕಳೆದ ಮೂರು ದಿನಗಳಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಮಣ್ಣು ತುಂಬಲೆಂದು ಕರೆತಂದರು. ಇಲ್ಲಿಗೆ ಬಂದು ನೋಡಿದಾಗ ಶೌಚಗುಂಡಿ ಎಂದು ಗೊತ್ತಾಯಿತು. ಹೊಟ್ಟೆಪಾಡಿಗಾಗಿ ಒಪ್ಪಿಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ಮಾಡಬಾರದೆಂದು ನಮಗೆ ಗೊತ್ತಿರಲಿಲ್ಲ. ಇನ್ನು ಮುಂದೆ ಇಂತಹ ಕೆಲಸಕ್ಕೆ ಕರೆದರೆ ಹೋಗುವುದಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಘಟನೆಯ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಸಾಮಾಜಿಕ ಹೋರಾಟಗಾರ ಜಟ್ಟಿ ಅಗ್ರಹಾರ ನಾಗರಾಜು ಅವರು ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಕಟ್ಟಡ ನಿರ್ಮಾಣ ಎಂಜಿನಿಯರ್‌ ವಿರುದ್ಧ ನಗರಠಾಣೆಯಲ್ಲಿ ಸೋಮೋಟೋ ಪ್ರಕರಣದಾಖಲಾಗಿರುವುದಾಗಿ ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿನಿರ್ದೇಶಕಿ ಸೋನಿಯಾ ವರ್ಣೇಕರ್‌ ತಿಳಿಸಿದ್ದಾರೆ.

ಸಂತ್ರಸ್ಥ ಕಾರ್ಮಿಕರಿಗೆ ಪರಿಹಾರ ಸಂಬಂಧ ಸೋಮವಾರ ಪಾಲಿಕೆ ಅಧಿಕಾರಿಗಳೊಂದಿಗೆ ಪತ್ರ ಸಮಾಲೋಚನೆ ನಡೆಸುವುದಾಗಿ ಪ್ರಜಾಪ್ರಗತಿಗೆ ತಿಳಿಸಿದ್ದಾರೆ. ಕ್ರಮಕ್ಕೆ ಆಗ್ರಹ:ತುಮಕೂರು ನಗರದ ಕೆಇಬಿ ಇಂಜಿನಿಯರ್ಸ್‌ ಸಂಘದ ಆವರಣದಲ್ಲಿ ದಲಿತ ಕಾರ್ಮಿಕರ ಕೈಯಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಶೌಚಗು ಂಡಿಯ ಮಲವನ್ನು ತೆಗೆಸಿ ಟ್ರ್ಯಾಕ್ಟರ್‌ ತುಂಬಿಸುವ ಅಮಾನವೀಯ ಕೃತ್ಯ ನಡೆದಿರುವುದನ್ನು ಖಂಡಿಸಿ ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ ಹಾಗೂ ಸಿಐಟಿಯು ಆಗ್ರಹ ವ್ಯಕ್ತಪಡಿಸಿದೆ.

ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ತುಮಕೂರು ಮಹಾನಗರ ಪಾಲಿಕೆ ಹಾಗೂ ಪೊಲೀಸ್‌‍ ಇಲಾಖೆಯು ಜಂಟಿಯಾಗಿ ತನಿಖೆ ನಡೆಸಿ, ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂತ್ರಸ್ತ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಮುನಿಸಿಪಲ್‌ ಕಾರ್ಮಿಕರ ಸಂಘ ಒತ್ತಾಯಿಸಿದೆ.

ಈ ಅಮಾನವೀಯ ಘಟನೆಯನ್ನು ಕೆಲ ಪ್ರಭಾವಿ ವ್ಯಕ್ತಿಗಳು ಅಥವಾ ಸಂಬಂಧಪಟ್ಟವರು ಮುಚ್ಚಿಹಾಕುವ ಪ್ರಯತ್ನ ನಡೆಸುವ ಸಾಧ್ಯತೆ ಇರುವುದರಿಂದ, ಜಿಲ್ಲಾಡಳಿತವು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಘಟನೆಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಸಂರಕ್ಷಿಸಿ, ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಬಂಧಪಟ್ಟವರ ವಿರುದ್ದ ಕಾನೂನು ಪ್ರಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

RELATED ARTICLES

Latest News