ಚಿಕ್ಕಮಗಳೂರು,ಮಾ.28- ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧರೊಬ್ಬರಿಗೆ 48.50 ಲಕ್ಷ ವಂಚಿಸಿರುವ ಪ್ರಕರಣ ಕಾಫಿ ನಾಡಿನಲ್ಲಿ ನಡೆದಿದೆ. ರಾಜ್ಯದಲ್ಲಿ ಸೈಬರ್ ಅಪರಾಧಗಳ ಅಬ್ಬರ ಮುಂದುವರಿದಿದ್ದು, ಇದೀಗ ಜಿಲ್ಲೆಯಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ಸಾರ್ವಜನಿಕರು ಮೋಸ ಹೋಗುತ್ತಿದ್ದರೆ ಪೊಲೀಸರಿಗೆ ಇದೊಂದು ತಲೆ ನೋವಾಗಿದೆ.
ಜಿಲ್ಲೆಯ ಕಡೂರು ತಾಲ್ಲೂಕಿನ ಆಸಂದಿ ಗ್ರಾಮದ 71 ವರ್ಷದ ಎ.ಆರ್.ಲೋಕೇಶಪ್ಪ ಎಂಬುವವರು ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 48 ಲಕ್ಷದ 50 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ಮಾರ್ಚ್ 15ರಂದು ಲೋಕೇಶಪ್ಪ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, ನೀವು ನರೇಶ್ ಗೋಯೆಲ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಹೆದರಿಸಿದ್ದಾನೆ.
ವಂಚಕರು ಲೋಕೇಶಪ್ಪ ಅವರಿಗೆ ಮಾನಸಿಕ ಒತ್ತಡ ಹೇರಿ, ತನಿಖೆ ಮುಗಿಯುವವರೆಗೆ ಯಾರೊಂದಿಗೂ ಮಾತನಾಡಬಾರದು ಮತ್ತು ಕೊಠಡಿಯಿಂದ ಹೊರಬರಬಾರದು ಎಂದು ಸೂಚಿಸಿ ಅವರನ್ನು ಡಿಜಿಟಲ್ ಬಂಧನದಲ್ಲಿರಿಸಿದ್ದರು.
ಸರ್ಕಾರದ ಸಂಸ್ಥೆಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡ ವಂಚಕರು, ಪರಿಶೀಲನೆಗಾಗಿ ನಿಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆಕ್ಟಿಐ ಖಾತೆಗೆ ವರ್ಗಾಯಿಸಬೇಕು ಎಂದು ನಂಬಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಲೋಕೇಶಪ್ಪ ಅವರು ಹಂತ ಹಂತವಾಗಿ ಒಟ್ಟು 48.50 ಲಕ್ಷ ರೂಪಾಯಿಯನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ.
ಬಳಿಕ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ಲೋಕೇಶಪ್ಪ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರದಿಂದಿರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಯಾವುದೇ ಸರ್ಕಾರಿ ಅಧಿಕಾರಿಗಳು ಫೋನ್ ಮೂಲಕ ಹಣ ವರ್ಗಾವಣೆಗೆ ಕೇಳುವುದಿಲ್ಲ ಮತ್ತು ಅಪರಿಚಿತ ಕರೆಗಳಿಗೆ ಬೆದರಿ ಬ್ಯಾಂಕ್ ಮಾಹಿತಿ ಹಂಚಿಕೊಳ್ಳಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಪ್ರಸ್ತುತ ಸೈಬರ್ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
