Saturday, April 18, 2026
Homeಜಿಲ್ಲಾ ಸುದ್ದಿಗಳುಜಮೀನಿನ ರಸ್ತೆಗಾಗಿ ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದ ರೈತ

ಜಮೀನಿನ ರಸ್ತೆಗಾಗಿ ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದ ರೈತ

Farmer offers radish as bribe for road to his land

ಮಧುಗಿರಿ,ಫೆ.4- ತನ್ನ ಜಮೀನಿಗೆ ರಸ್ತೆ ಮಾಡಿಕೊಡಲು ಅರ್ಜಿ ನೀಡಿ ಮನವಿ ಮಾಡಿದ್ದು, ಲೋಕಾಯುಕ್ತರೇ ಸೂಚಿಸಿದರೂ ಕ್ಯಾರೆ ಎನ್ನದ ಕಂದಾಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಅಲೆದಾಡಿಸಿದ್ದಕ್ಕೆ ಅಕ್ರೋಶಗೊಂಡ ರೈತನೊಬ್ಬ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಾಲೂಕಿನ ದೊಡ್ಡರಿ ಹೋಬಳಿಯ ಜಕ್ಕೇನಹಳ್ಳಿಯ ರೈತ ಪ್ರಸನ್ನಕುಮಾರ್‌ರವರಿಗೆ ಈ ಸ್ಥಿತಿ ಬಂದಿದ್ದು ತಾಲೂಕು ಕಚೇರಿಯ ಮುಂದೆ ಮೈಕ್‌ ಹಿಡಿದು ನನಗೆ ಲಂಚ ನೀಡಲು ಹಣವಿಲ್ಲ. ಬದಲಿಗೆ ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಬನ್ನಿ ಎಂದು ಘೋಷಣೆ ಕೂಗಿದ್ದಾನೆ.

ರೈತ ಪ್ರಸನ್ನಕುಮಾರ್‌ ತನ್ನ ಜಮೀನಿನಲ್ಲೇ ತರಕಾರಿ ಇತರೆ ವ್ಯವಸಾಯೋತ್ಪನ್ನವನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಆದರೆ ಜಮೀನಿಗೆ ರಸ್ತೆಯಿಲ್ಲದ ಕಾರಣ ರಸ್ತೆಗಾಗಿ 2 ವರ್ಷದ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದಾರೆ.

ಇತ್ತ ದಾರಿ ಒತ್ತುವರಿ ಬಿಡಿಸಿಕೊಡದೆ ಅತ್ತ ಹೊಸ ದಾರಿ ಮಾಡಿಕೊಡದೆ ತಮ ಮನವಿಗೆ ಕಿವಿಗೊಡದ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಇದರಿಂದ ರೈತನ ಜಮೀನಿಗೆ ಕಾನೂನು ಬದ್ಧವಾಗಿ ಒಂದು ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡಲು ಸೂಚಿಸಿತ್ತು.

ಈಗ 2 ತಿಂಗಳಾದರೂ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಕಾನೂನು ಬದ್ಧ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಹಣವಿಲ್ಲದ ರೈತ ಅಧಿಕಾರಿಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದು, ವಿಧಿಯಿಲ್ಲದೆ ತಹಶೀಲ್ದಾರ್‌ ಬಳಿಯಲ್ಲೂ ಮನವಿ ಮಾಡಿದ್ದಾಗ ರಸ್ತೆ ಮಾಡಿಕೊಡಲು ಸೂಚಿಸಿದ್ದರು.

ಆದರೆ ಇಲ್ಲಿಯವರೆಗೂ ರಸ್ತೆ ನಿರ್ಮಾಣಕ್ಕೆ ಬಾರದ ಹಣಕ್ಕಾಗಿ ಸತಾಯಿಸಿದ್ದರಿಂದ ಅಂತಿಮವಾಗಿ ತಾಲ್ಲೂಕು ಕಚೇರಿಗೆ ಬಂದು ಹಣದ ಬದಲು ಮೂಲಂಗಿ ಕೊಡುತ್ತೇನೆ ಎಂದು ವಿಶೇಷವಾಗಿ ಪ್ರತಿಭಟನೆ ನಡೆಸಿ ಆ್ರಕೋಶ ಹೊರಹಾಕಿದ್ದಾರೆ.

RELATED ARTICLES

Latest News