ಹಾಸನ,ಫೆ.22- ನಗರದ ಎನ್ ಡಿ ಆರ್ ಕೆ ಶಿಕ್ಷಣ ಸಂಸ್ಥೆ ಎದುರಿನ ರೈಲು ಹಳಿ ಬಳಿ ರೈಲಿಗೆ ಸಿಕ್ಕಿ ವೃದ್ಧ ದಂಪತಿ ಆತಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.ಮೃತಪಟ್ಟ ದಂಪತಿಯ ಗುರುತು ಹಾಗೂ ವಿವರಗಳು ಇನ್ನೂ ಪತ್ತೆಯಾಗಿಲ್ಲ.
ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಕರುಣಾಜನಕ ಘಟನೆ ಸ್ಥಳೀಯರಲ್ಲಿ ತೀವ್ರ ಮರುಕನ್ನುಂಟುಮಾಡಿದ್ದು, ದಂಪತಿ ಇಂತಹ ಕಠಿಣ ನಿರ್ಧಾರಕ್ಕೆ ಕಾರಣವೇನು ಎಂಬುದರ ಕುರಿತು ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದೆ.
ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಗೊರೂರು ತಾಲೂಕಿನ ಕೋನಾಪುರ ಐಲ್ಯಾಂಡ್ ಪ್ರದೇಶದ ಹೇಮಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.ಸುಮಾರು 40 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹ ನದಿಯಲ್ಲಿ ತೇಲುತ್ತಿದ್ದು, ಕೆಲ ದಿನಗಳ ಹಿಂದೆ ನದಿಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆ ಸ್ಥಳೀಯರು ಜಮೀನಿನ ಸಮೀಪ ನದಿಯ ದಡದಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಮೃತನ ಗುರುತು ಪತ್ತೆ ಹಾಗೂ ಸಾವಿನ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.
