ಯಶವಂತಪುರ, ಫೆ.22- ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ದೊಡ್ಡಆಲದಮರ ಸಮೀಪದ ಚುಂಚನಕುಪ್ಪೆ ಗ್ರಾಮದಲ್ಲಿ ಸೆರೆಯಾಗಿದೆ.
ಕಳೆದ ಕೆಲವು ದಿನಗಳಿಂದ ಚುಂಚನಕುಪ್ಪೆ ಸೇರಿದಂತೆ ತಾವರೆಕೆರೆ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಉಪಟಳ ಮಿತಿಮೀರಿತ್ತು. ಇತ್ತೀಚಿಗಷ್ಟೇ ಬ್ಯಾಲಾಳು ಗ್ರಾಮದ ರೈತ ಹನುಮಂತಯ್ಯ ಅವರ ಕರುವನ್ನು ಚಿರತೆ ಕೊಂದು ಹಾಕಿತ್ತು. ಜತೆಗೆ ದೇವಮಾಚೋಹಳ್ಳಿಯ ರಂಗಸ್ವಾಮಿ ಎಂಬ ರೈತರ ಹಸುವನ್ನು ಸಹ ಬಲಿ ಪಡೆದಿತ್ತು. ಕುರಿ, ಮೇಕೆಗಳನ್ನು ಸಾಯಿಸಿತ್ತು. ಅಲ್ಲದೆ ನಾಯಿಗಳನ್ನು ತಿಂದು ಹಾಕಿತ್ತು.
ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಚಿರತೆಯ ಸಂಭಾವ್ಯ ದಾಳಿ ಬಗ್ಗೆ
ಸ್ಥಳೀಯರು ಭಯಭೀತರಾಗಿದ್ದರು. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಇಲ್ಲಿ ಓಡಾಡಲು, ವಾಯುವಿಹಾರಕ್ಕೆ ತೆರಳಲು ಭಯ ಪಟ್ಟು, ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಪಂ ಮಾಜಿ ಅಧ್ಯಕ್ಷ ಸುಕುಮಾರ್ ಹಾಗೂ ಗ್ರಾಮಸ್ಥರು ಶಾಸಕ ಎಸ್.ಟಿ ಸೋಮಶೇಖರ್ ಮೂಲಕ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದರು.
ಪರಿಣಾಮ ಕಗ್ಗಲಿಪುರ ವಲಯ ಕೆಂಗೇರಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಸ್.ಕೆ.ರವಿ ನೇತೃತ್ವದ ತಂಡ ಚುಂಚನಕುಪ್ಪೆಯಲ್ಲಿ ಬೋನು ಇರಿಸಿತ್ತು. ಬೇಟೆಯಾಸೆಗೆ ಬಂದ ಚಿರತೆ ಸೆರೆ ಸಿಕ್ಕಿದ್ದು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
