ಚಿಕ್ಕಮಗಳೂರು,ಜು.23- ಅಕ್ರಮವಾಗಿ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿದೆ. ನಗರದ ಟಿಪ್ಪುನಗರದ ಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಭಾಗದ ರಸ್ತೆಯ ನಿವಾಸಿಯೊಬ್ಬರು ಅಕ್ರಮವಾಗಿ ಪಂಜರದಲ್ಲಿ ಬಂಧಿಸಿಟ್ಟುಕೊಂಡಿದ್ದ ಎರಡು ಕಾಡು ಗಿಳಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡಿದೆ.
ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಗಿಳಿಗಳನ್ನು ಸಾಕುತ್ತಿದ್ದ ಸುರೇಶ್ ಎಂಬಾತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಮಿಂಚಿನ ದಾಳಿಯಲ್ಲಿ ಸುರೇಶ್ ವಶದಲ್ಲಿದ್ದ ಗಿಳಿಗಳನ್ನು ಪಂಜರದ ಸಹಿತ ವಶಕ್ಕೆ ಪಡೆಯಲಾಗಿದ್ದು, ಸೂಕ್ತ ಸಂರಕ್ಷಣೆಗಾಗಿ ಸ್ಥಳೀಯ ಆರ್‌ಎಫ್‌ಒ ಅವರ ಸುಪರ್ದಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ನ್ಯಾಯಾಲಯಕ್ಕೆ ವರದಿಯನ್ನೂ ಸಲ್ಲಿಸಲಾಗಿದೆ.
ರಾಜ್ಯ ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪ ಮಹಾನಿರೀಕ್ಷಕರಾದ ಜಿ.ಸಂಗೀತ ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಬಾಬುದ್ದೀನ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣರಾಜು ಅರಸ್, ಕೆ.ಎಸ್.ದಿಲೀಪ್, ಹೆಚ್.ನಟರಾಜ್, ಹಾಲೇಶ್, ಲೋಹಿತ್ ಸಿ.ಎಂ. ಹಾಗೂ ಚಾಲಕ ತಿಮಶೆಟ್ಟಿ ಭಾಗವಹಿಸಿದ್ದರು.
