ಬೆಂಗಳೂರು,ಮೇ 23- ತುಮಕೂರು ರಸ್ತೆಯ ಮಾದಾವರ-ತುಮಕೂರು ನಡುವಿನ ಮೆಟ್ರೋ ರೈಲು ಯೋಜನೆಯ ವಿಸ್ತೃತ(ಡಿಪಿಆರ್) ವರದಿಯ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು. ವಿಧಾನಸೌಧದಲ್ಲಿ ಮೆಟ್ರೋ ರೈಲು ಯೋಜನೆಯ ವಿಸ್ತೃತ ವರದಿ ಸ್ವೀಕರಿಸಿ ಮಾತನಾಡಿದ ಅವರು, ಮಾದಾವರ-ತುಮಕೂರು ಮೆಟ್ರೋ ರೈಲು ಯೋಜನೆಯ ಡಿಪಿಆರ್ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಘೋಷಿಸಿದಂತೆ ಮಾದಾವರದಿಂದ ತುಮಕೂರಿಗೆ ಮೆಟ್ರೋ ರೈಲು ಯೋಜನೆ ವಿಸ್ತರಿಸುವ ಅಗತ್ಯದ ಕುರಿತಂತೆ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಹೈದ್ರಾಬಾದ್ ಮೂಲದ ಕಂಪನಿಯೊಂದು ಕಾರ್ಯಸಾಧ್ಯತಾ ವರದಿಯನ್ನು ನೀಡಿತ್ತು. ಆ ವರದಿಯಲ್ಲಿ ಮೆಟ್ರೋ ರೈಲು ಯೋಜನೆಯನ್ನು ಮಾಡಬಹುದು ಎಂದು ವರದಿ ಕೊಟ್ಟಿತ್ತು. ಅದಕ್ಕಾಗಿ 3.50 ಕೋಟಿ ರೂ. ವೆಚ್ಚವಾಗಿತ್ತು ಎಂದರು.
ಅನಂತರ ಮತ್ತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ತೀರ್ಮಾನಿಸಲಾಗಿತ್ತು. ಮೆಟ್ರೋ ರೈಲು ನಿಗಮದವರೇ ಡಿಪಿಆರ್ ಮಾಡಿಸಿ ಅವರ ಹಂತದಲ್ಲಿ ಚರ್ಚೆ ಮಾಡಿ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಪಿಪಿಪಿ ಮಾದರಿಯಲ್ಲಿ ಈ ಮೆಟ್ರೋ ರೈಲು ಯೋಜನೆ ಅನುಷ್ಠಾನಕ್ಕೆ ತರಬೇಕು ಎಂಬ ಉದ್ದೇಶವಿದ್ದು ಸುಮಾರು 20 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
ಈ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು, ಎಷ್ಟು ನಿಲ್ದಾಣಗಳನ್ನು ನಿರ್ಮಿಸಬೇಕು, ಎಷ್ಟು ಸಿಬ್ಬಂದಿ ಬೇಕು ಎಂಬ ವಿಚಾರದ ಬಗ್ಗೆ ಡಿಪಿಆರ್ನಲ್ಲಿ ಉಲ್ಲೇಖಿಸಿದ್ದಾರೆ. ಈ ವಿಷಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಟೆಂಡರ್ ಕರೆದು ಯೋಜನೆ ಅನುಷ್ಠಾನದ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ತುಮಕೂರು ಮತ್ತು ಬೆಂಗಳೂರು ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಯೋಜನೆ ಜಾರಿಗೊಳಿಸಬೇಕು ಎಂಬ ಬೇಡಿಕೆ ಇದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
