ಬೆಂಗಳೂರು, ಮಾ.22- ಕನ್ನಡ ಚಿತ್ರರಂಗ ಕಂಡ ಅದ್ಭುತ ತಂತ್ರಜ್ಞ ಜೋಡಿ ಎಂದರೆ ರವಿಚಂದ್ರನ್ ಮತ್ತು ಹಂಸಲೇಖ ಅವರದ್ದು. 80-90ರ ದಶಕದಲ್ಲಿ ರವಿಚಂದ್ರನ್ ನಿರ್ದೇಶನದ ಮತ್ತು ಹಂಸಲೇಖ ಸಂಗೀತ ನಿರ್ದೇಶನದ ಚಿತ್ರಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಈ ಜೋಡಿಯ ಹೆಸರೇ ಸಾಕಾಗಿತ್ತು, ಒಂದು ಚಿತ್ರಕ್ಕೆ ಪ್ರೇಕ್ಷಕರನ್ನು ಸೆಳೆಯುವುದಕ್ಕೆ. ಅಂಥ ಜನಪ್ರಿಯ ಮತ್ತು ಯಶಸ್ವಿ ಜೋಡಿಯು, 2000ರ ನಂತರ ಕಾರಣಾಂತರಗಳಿಂದ ಜೊತೆಯಾಗಿ ಕೆಲಸ ಮಾಡದಿರಬಹುದು. ಆದರೆ, ಇಂದಿಗೂ ಅವರು ಮಾಡಿದ ಹಾಡುಗಳ ಮೋಡಿಯಿಂದ ಕನ್ನಡಿಗರು ಹೊರಬರುವುದಕ್ಕೆ ಸಾಧ್ಯವಾಗಿಲ್ಲ.
ರವಿಚಂದ್ರನ್ ಮತ್ತು ಹಂಸಲೇಖ ಈಗ ಜೊತೆಯಾಗಿ ಕೆಲಸ ಮಾಡದಿದ್ದರೂ, ಅವರನ್ನು ಸಂಭ್ರಮಿಸುವ ಕೆಲಸ ನಡೆಯುತ್ತಿದೆ. ಇಬ್ಬರ ನಾಲ್ಕು ದಶಕಗಳ ಪಯಣವನ್ನು ಸಂಭ್ರಮಿಸುವ ಸಲುವಾಗಿ, ಪ್ರಸ್ತುತ ಇನ್ನೋವೇಟಿವ್ ಸಂಸ್ಥೆ ಮೇ 30ರಂದು ಸಂಜೆ 6ರಿಂದ ರಾತ್ರಿ 12ರವರೆಗೂ ಕ್ರೇಜಿ ಬ್ರಹ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. Where Music Meets Magic ಎಂಬ ಅಡಿಬರಹವಿರುವ ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯ ಕೆಲವು ಪ್ರಮುಖವಾದ ಹಾಡುಗಳನ್ನು ಹಾಡುವುದರ ಜೊತೆಗೆ ಮರುಸೃಷ್ಟಿ ಮಾಡಲಾಗುತ್ತಿದೆ.
ರವಿಚಂದ್ರನ್ ಮಾತನಾಡಿ, ಒಂದು ಸಂಬಂಧದಲ್ಲಿ ಬಿರುಕು ಬಿಟ್ಟಾಗ, ಸಂಭ್ರಮಿಸುವವರು ಜಾಸ್ತಿ. ಆದರೆ, ನಮನ್ನು ಒಂದಾಗಿ ಸೇರಿಸುವುದಕ್ಕೆ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ಕೋಪ, ಈಗೋ, ಯಶಸ್ಸು ಇದ್ದಾಗ ಬಿರುಕು ಸಹಜ. ಗೆಲುವು ಯಾರಿಂದ ಎಂಬ ಪರೀಕ್ಷೆ ಬಂದೇ ಬರುತ್ತದೆ. ಅದು ಜೀವನದ ಒಂದು ಭಾಗ. ಆದ್ದರಿಂದ ನಮಿಬ್ಬರ ಜೋಡಿಯ ಮೌಲ್ಯ ಗೊತ್ತಾಗುತ್ತಿದೆ ಎಂದರು.
ಇದೊಂದು ನಾಡು ಬಯಸಿದ ಕಾರ್ಯಕ್ರಮ ಎಂದ ಹಂಸಲೇಖ, ನೀವಿಬ್ಬರೂ ಯಾಕೆ ಸಿನಿಮಾ ಮಾಡೋಕೆ ಆಗುತ್ತಿಲ್ಲ ಎಂದು ಹಲವರು ಕೇಳಿದ್ದಾರೆ. ನಾವಿಬ್ಬರೂ ಜೊತೆಯಾಗಿ ಇರಬೇಕಾದರೆ, ಸಿನಿಮಾದಲ್ಲೇ ಇರಬೇಕೇನೂ? ವೇದಿಕೆ ಮೇಲೆ ಜೊತೆಯಾಗಬಹುದು. ನಾವಿಬ್ಬರೂ ವೇದಿಕೆಯಲ್ಲಿ ಒಟ್ಟಾಗಿ ಇರುವುದರ ಜೊತೆಗೆ, ನಾವು ಮಾಡಿದ ಕೆಲಸಗಳನ್ನು ನೆನಪಿಸಿಕೊಳ್ಳುತ್ತೇವೆ. ಆ ನೆನಪಿನ ದೋಣಿಯಲ್ಲಿ ಅಭಿಮಾನಿಗಳನ್ನು ತೇಲಿಸುವ ಕೆಲಸವನ್ನು ಮಾಡುತ್ತೇವೆ ಎಂದರು.
